ಬೆಂಗಳೂರು: ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಇನ್ನುಳಿದಿದ್ದು 5 ಕೆಜಿಗೆ ಹಣ ಕೊಡುತ್ತೇವೆ ಎಂದು ನಿರ್ಧರಿಸಿದ್ದೇ ತಡ ವಿಪಕ್ಷಗಳು ಕೊಂಕು ಹುಡುಕಲು ಶುರುಮಾಡಿದರು. ಅನ್ನಭಾಗ್ಯ ಯೋಜನೆಯ ಮೊದಲ ತುತ್ತಿನಲ್ಲಿಯೇ ಕಲ್ಲು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ (Congress) ಸರ್ಕಾರ ಅನ್ನಭಾಗ್ಯ ಯೋಜನೆ ನೀಡುವುದಾಗಿ ಭರವಸೆ ನೀಡಿತ್ತು. ಈಗ ಪೂರ್ಣ ಪ್ರಮಾಣದಲ್ಲಿ ಅಕ್ಕಿ ಸಿಗದ ಹಿನ್ನೆಲೆ 10 ಕೆಜಿ ಅಕ್ಕಿ ಬದಲಿಗೆ 5 ಕೆಜಿ ಅಕ್ಕಿ ಕೊಟ್ಟು ಉಳಿದ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ನೀಡಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಕಾಂಗ್ರೆಸ್ ಸರ್ಕಾರದ ಈ ನಿರ್ಧಾರದ ಕುರಿತು ಮಾಜಿ ಸಿಎಂ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಚುನಾವಣೆಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ಹತ್ತು ಕೆಜಿ ಅಕ್ಕಿ ಕೊಡಿ, ಇಲ್ಲವೇ ಮಾರುಕಟ್ಟೆ ದರದಲ್ಲಿ ಪ್ರತಿ ಕೆಜಿಗೆ 60 ರೂ.ಗಳಂತೆ ಹತ್ತು ಕೆಜಿಗೆ ತಗುಲುವ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಿ. ಇಲ್ಲದಿದ್ದರೆ ಮಾತಿಗೆ ತಪ್ಪಿದ್ದಕ್ಕಾಗಿ ಜನರಿಗೆ ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದಾರೆ