ಗದಗ: ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಬಸಲಿಂಗಪ್ಪ ಮುಂಡರಗಿ ಅವರ ನೇತೃತ್ವದಲ್ಲಿ ಗದಗಿನ ನೂತನ ಶಾಸಕರು ಮತ್ತು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲ್ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಸಲಿಂಗಪ್ಪ ಮುಂಡರಗಿ ಅವರು ಮಾತನಾಡಿ ಗದಗ ಜಿಲ್ಲೆಯ ಮಾಜಿ ಸೈನಿಕರ ಹಾಗೂ ವೀರನಾರಿಯರ ಮತ್ತು ಅರೆಸೇನಾಪಡೆಗಳ ಯೋಧರ ಸಮಸ್ಯೆಗಳು, ಕುಂದು ಕೊರತೆಗಳ ಹಾಗೂ ಸರ್ಕಾರದ ಸವಲತ್ತುಗಳ ಮತ್ತು ಬೇಡಿಕೆಗಳ ಕುರಿತು ಮಾತನಾಡಿ ಸಚಿವರಿಗೆ ಮನವಿ ಮಾಡಿಕೊಂಡ್ರು.
ಜೊತೆಗೆ ಗದಗ ಜಿಲ್ಲೆಯಲ್ಲಿ ಸೈನಿಕ ಭವನ, ಮತ್ತು ಯುದ್ಧ ಸ್ಮಾರಕ, ಹಾಗೂ ಸೈನಿಕ ತರಬೇತಿ ಕೇಂದ್ರದ ನಿರ್ಮಾಣಕ್ಕಾಗಿ ಸರ್ಕಾರದ ಅನುದಾನದಲ್ಲಿ ಉಚಿತವಾಗಿ ಕನಿಷ್ಠ ಒಂದು ಎಕರೆ ಜಮೀನನ್ನು ನೀಡಬೇಕೆಂದು ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಸಚಿವ ಎಚ್ ಕೆ ಪಾಟೀಲ್ ಅವರು, ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಸೇವೆ ತುಂಬಾ ಅಪಾರವಾದದ್ದು, ಸೈನಿಕರೆಂದರೆ ನನಗೆ ಅತಿಯಾದ ಪ್ರೀತಿ ಹಾಗೂ ಗೌರವ ಇದೆ, ಸೈನಿಕರು ದೇಶದ ಗಡಿಯನ್ನು ಕಾಯುವುದರಿಂದ ನಾವೆಲ್ಲರೂ ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇವೆ ಅದಕ್ಕಾಗಿ ನಾವೆಲ್ಲರೂ ಸೈನಿಕರನ್ನು ಗೌರವಿಸೋಣ ಆದಷ್ಟು ಬೇಗನೆ ಗದಗನಲ್ಲಿ ಯುದ್ಧದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಬಲಿದಾನ ಮಾಡಿದಂತ ವೀರ ಯೋಧರ ಸ್ಮಾರಕವನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದ್ರು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಾಜಿ ಸೈನಿಕರ ಹಾಗೂ ವೀರನಾರಿಯರ ಕುಂದು ಕೊರತೆಗಳ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ಗೌರವಾಧ್ಯಕ್ಷ ವಾಸಪ್ಪ ಸೆಟವಾಜಿ, ಉಪಾಧ್ಯಕ್ಷ ಎನ್ ಆರ್ ದೇವಾಂಗ ಮಠ, ಪ್ರಧಾನ ಕಾರ್ಯದರ್ಶಿ ರವಿಕುಮಾರ ಜಂಗಮನಿ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕೊರಕನವರ, ಸದಸ್ಯರಾದ ವೆಂಕಪ್ಪ ಕಲಹಾಳ, ಪ್ರಕಾಶಪ್ಪ ಬಂಡಿಹಾಳ, ವೀರನಾರಿಯರ ಅಧ್ಯಕ್ಷರಾದ ಇಂದಿರಾಹೆಬಸೂರು, ಗದಗ ಜಿಲ್ಲಾ ಅರೆಸೇನಾ ಪಡೆಗಳ ಅಧ್ಯಕ್ಷರಾದ ನಾಗರಾಜ್ ಕುಂದರಗಿ, ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮತ್ತು ವೀರನಾರಿಯರು ಸೇರಿದಂತೆ ಅನೇಕ ಮಾಜಿ ಸೈನಿಕರು ಉಪಸ್ಥಿತರಿದ್ದರು