ಪ್ಯಾರಿಸ್: ವಾಹನ ತಪಾಸಣೆ ವೇಳೆ 17 ವರ್ಷದ ಯುವಕನನ್ನು ಸಂಚಾರ ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿರುವುದನ್ನು ಖಂಡಿಸಿ ಫ್ರಾನ್ಸ್ನಲ್ಲಿ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಅನೇಕ ಸಾರ್ವಜನಿಕ ಕಟ್ಟಡಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾನ್ಸ್ ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಹತ್ತಿಕ್ಕಲು 40,000 ಪೊಲೀಸರನ್ನು ನಿಯೋಜಿಸಲಾ ಗಿದೆ. ಶಾಂತ ರೀತಿಯಿಂದ ವರ್ತಿಸುವಂತೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್ ಸೇರಿದಂತೆ ಹಲವು ಸಚಿವರು ಮನವಿ ಮಾಡಿದ್ದರು ಜನ ಮಾತ್ರ ಕ್ಯಾರೆ ಎನ್ನದೆ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ.
ಬುಧವಾರದಿಂದ ಇಲ್ಲಿಯವರೆಗೆ ಸುಮಾರು 100 ಸಾರ್ವಜನಿಕ ಕಟ್ಟಡಗಳನ್ನು ಹಾನಿಗೊಳಿಸಲಾಗಿದೆ. ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿದೆ. ಪ್ರತಿ ಭಟನೆ ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ. ಇದೇ ವೇಳೆ ಅನೇಕ ನಾಗರಿಕರು ಗಾಯಗೊಂಡಿದ್ದಾರೆ.
ಮಂಗಳವಾರ 17 ವರ್ಷದ ನಹೇಲ್ ಎಂಬ ಯುವಕ ಬಸ್ ಲೇನ್ನಲ್ಲಿ ಕಾರು ಓಡಿಸುತ್ತಿದ್ದ. ಯುವಕ ಚಿಕ್ಕ ವಯಸ್ಸಿನವ ನಾದ ಕಾರಣ, ಚಾಲನಾ ಪರವಾನಗಿ ಹೊಂದಿದ್ದಾನೆಯೇ ಎಂಬುದನ್ನು ತಪಾಸಣೆ ಮಾಡಲು ಸಂಚಾರ ಪೊಲೀಸರು ಕಾರನ್ನು ತಡೆದಿದ್ದಾರೆ. ಆದರೆ ಆತ ಕಾರನ್ನು ಮುಂದಕ್ಕೆ ಚಲಿಸಿದ್ದಾನೆ. ಕಾರನ್ನು ಹಿಂಬಾಲಿಸಿದ ಪೊಲೀಸರು, ಅನಾಮತ್ತಾಗಿ ಯುವಕನ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಆತ ಮೃತಪಟ್ಟಿದ್ದಾನೆ. ಘಟನೆ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.