ಇಸ್ಲಾಮಾಬಾದ್: ಪಾಕಿಸ್ತಾನದ ಖ್ಯಾತ ಸ್ನೂಕರ್ ಆಟಗಾರ ಹಾಗೂ ಏಷ್ಯನ್ ಅಂಡರ್-21 ಗೇಮ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮಜೀದ್ ಅಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಖಿನ್ನತೆಯಿಂದ ಬಳಲುತ್ತಿದ್ದ ಮಜಿದ್ ಅಲಿ (28) ಪಾಕಿಸ್ತಾನದ ಪಂಜಾಬ್ನ ಫೈಸಲಾಬಾದ್ ಬಳಿಯ ತನ್ನ ಹುಟ್ಟೂರಾದ ಸಾಮುಂದ್ರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರ ಕಡಿಯುವ ಯಂತ್ರವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಜೀದ್ ಹಲವಾರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. ರಾಷ್ಟ್ರೀಯ ಸರ್ಕ್ಯೂಟ್ನಲ್ಲಿ ಅಗ್ರ ಶ್ರೇಯಾಂಕದ ಆಟಗಾರರಾಗಿದ್ದರು. ಮಜೀದ್ ತನ್ನ ಹದಿಹರೆಯದಿಂದಲೂ ಖಿನ್ನತೆಯಿಂದ ಬಳಲುತ್ತಿದ್ದರು. ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗೆ ಮಾಡಿಕೊಳ್ಳುತ್ತಾನೆ ಅಂತ ನಾವು ನಿರೀಕ್ಷಿಸಿರಲಿಲ್ಲ ಎಂದು ಮಜೀದ್ ಸಹೋದರ ಉಮರ್ ಹೇಳಿದ್ದಾರೆ.
ಒಂದು ತಿಂಗಳ ಅವಧಿಯಲ್ಲಿ ಸಾವನ್ನಪ್ಪಿದ ಎರಡನೇ ಸ್ನೂಕರ್ ಆಟಗಾರ ಮಜೀದ್ ಆಗಿದ್ದಾರೆ. ಕಳೆದ ತಿಂಗಳು ಮತ್ತೊಬ್ಬ ಅಂತಾರಾಷ್ಟ್ರೀಯ ಸ್ನೂಕರ್ ಆಟಗಾರ ಮುಹಮ್ಮದ್ ಬಿಲಾಲ್ ಹೃದಯ ಸ್ತಂಭನದಿಂದ ನಿಧನರಾಗಿದ್ದರು.