ಬೆಂಗಳೂರು ;- ಅಕ್ಕಿಯ ಕೊರತೆ ಹಿನ್ನೆಲೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಬದಲು ಹಣ ಕೊಡಲು ಸರ್ಕಾರ ನಿರ್ಧರಿಸಿದೆ.
ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲವೆಂದು ಸ್ಪಷ್ಟಪಡಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಾಡಿದ ಬೇರೆ ಬೇರೆ ಪ್ರಯತ್ನಗಳು ಕೈಗೂಡದ ಕಾರಣ ಹಣ ವಿತರಣೆಯ ನಿರ್ಧಾರಕ್ಕೆ ಬರಲಾಯಿತು.
ಜನರ ಕೈಗೆ ಹಣ ಸಿಕ್ಕುವುದರೊಂದಿಗೆ ಸರ್ಕಾರಕ್ಕೂ ಉಳಿತಾಯ ತರುತ್ತಿದೆ.
ಅಕ್ಕಿ ಸಿಕ್ಕಿದ್ದರೆ ಸಾಗಣೆ ವೆಚ್ಚ, ಸಗಟು ಮತ್ತು ಚಿಲ್ಲರೆ ಕಮೀಷನ್ ಕೊಡಬೇಕಾಗಿತ್ತು. ಸಾಗಣೆ ವೆಚ್ಚ ಪ್ರತಿ ಕೆಜಿಗೆ 1.10 ರೂ., ಸಗಟು ಕಮೀಷನ್ 35 ಪೈಸೆ ಹಾಗೂ ಚಿಲ್ಲರೆ ಕಮೀಷನ್ 1.84 ರೂ. ನೀಡಲಾಗುತ್ತಿತ್ತು. ಅಂದರೆ ಒಟ್ಟಾರೆ 2.69 ಪೈಸೆ ಈಗ ಸರ್ಕಾರಕ್ಕೆ ಉಳಿತಾಯವಾಗುತ್ತದೆ.
ರಾಜ್ಯದಲ್ಲಿ 1.14 ಕೋಟಿ ಪಡಿತರ ಚೀಟಿಗಳಿದ್ದು, ಇವುಗಳಿಂದ ಒಟ್ಟಾರೆ 4.30 ಕೋಟಿ ಫಲಾನುಭವಿಗಳಿದ್ದಾರೆ ಎಂಬ ಅಂದಾಜು ಇದೆ. ಇಷ್ಟು ಜನರಿಗೂ ಸರ್ಕಾರ ತಲಾ 5 ಕೆಜಿಯಂತೆ ಅಕ್ಕಿ ವಿತರಣೆ ಮಾಡಲು ಮಾಸಿಕ 2.28 ಲಕ್ಷ ಮೆಟ್ರಿಕ್ ಟನ್ ಬೇಕಾಗುತ್ತಿತ್ತು. ಅಕ್ಕಿ ಕೊಡಲು ಸಾಧ್ಯವಿಲ್ಲದ ಕಾರಣ ಪ್ರತಿ ವ್ಯಕ್ತಿಗೆ 170 ರೂ. ನೀಡಲು ನಿರ್ಧರಿಸಲಾಗಿದೆ. ಸಾಗಣೆ ವೆಚ್ಚ, ಕಮೀಷನ್ ಎಲ್ಲ ಲೆಕ್ಕ ಹಾಕಿದರೆ ಮಾಸಿಕ 61.33 ಕೋಟಿ ರೂ. ಸರ್ಕಾರಕ್ಕೆ ಉಳಿತಾಯವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ.