ಬೆಂಗಳೂರು ;- ಶೀಘ್ರವೇ ಸಾರಿಗೆ ಇಲಾಖೆಯಲ್ಲಿ 13,415 ಖಾಲಿ ಹುದ್ದೆಗಳ ಭರ್ತಿ ಮಾಡಲಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಸಾರಿಗೆ ನಿಗಮಗಳ ಮಗು 13,415 ಖಾಲಿ ಹುದ್ದೆ ಭರ್ತಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ನಿವೃತ್ತಿ, ಮರಣ ಸೇರಿ ವಿವಿಧ ಕಾರಣದಿಂದ ಹಲವು ವರ್ಷಗಳಿಂದ ಚಾಲಕರು, ನಿರ್ವಾಹಕರು, ತಾಂತ್ರಿಕ ವಿಭಾಗ ಸೇರಿ ಇತರೆ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಉತ್ತಮ ಸೇವೆ ನೀಡಲು ಸಮಸ್ಯೆಯಾಗುತ್ತಿದೆ. ಇದನ್ನು ನಿವಾರಿಸಲು ನಾಲ್ಕು ನಿಗಮಗಳಲ್ಲಿ ಖಾಲಿ ಇರುವ 13,415 ಹುದ್ದೆಗಳ ಭರ್ತಿಗೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಕೆಎಸ್ಆರ್ಟಿಸಿಯಲ್ಲಿ 3745 ಚಾಲನಾ ಸಿಬ್ಬಂದಿ, 726 ತಾಂತ್ರಿಕ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ಹೊಸದಾಗಿ 1,433 ಚಾಲನೆ ಸಿಬ್ಬಂದಿ, 2738 ತಾಂತ್ರಿಕ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುವುದು. ಕೆಕೆಆರ್ಟಿಸಿಯಲ್ಲಿ 1773 ನಿರ್ವಾಹಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಬಿಎಂಟಿಸಿಯಲ್ಲಿ 2000 ನಿರ್ವಾಹಕರು, 1 ಸಾವಿರ ಚಾಲಕ ಕಂ ನಿರ್ವಾಹಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.