ಬೆಂಗಳೂರು: ಅವಧಿ ಮುಗಿದ ಆಹಾರ ಉತ್ಪನ್ನಗಳನ್ನ ಮರು ಪ್ಯಾಕಿಂಗ್ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಗೋದಾಮಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಕಾಟನ್ ಪೇಟೆಯ ಅರಿಹಂತ್ ಟ್ರೇಡಿಂಗ್ ಕಂಪನಿ ಹೆಸರಿನ ಗೋದಾಮಿನಲ್ಲಿ ಪರಿಶೀಲನೆ ನಡೆಸಲಾಗಿದ್ದು ಪ್ರತಿಷ್ಠಿತ ಬ್ರ್ಯಾಂಡ್ ಗಳಿಗೆ ಸೇರಿದ ಬಳಕೆಯ ಅವಧಿ ಮೀರಿದ ಬಿಸ್ಕೆಟ್ಸ್, ಚಾಕೊಲೇಟ್, ಚಾಕೊಲೇಟ್ ಪೌಡರ್, ಅಡುಗೆ ಏಣ್ಣೆ, ರವೆ ಸೇರಿದಂತೆ ಅನೇಕ ಉತ್ಪನ್ನಗಳನ್ನ ವಶಪಡಿಸಿಕೊಳ್ಳಲಾಗಿದೆ.
ಅಂಗಡಿಯೊಂದರಲ್ಲಿ ಅವಧಿ ಮೀರಿದ ಬಿಸ್ಕೆಟ್ ಪ್ಯಾಕ್ ಮಾರಾಟ ಮಾಡುತ್ತಿರುವುದರ ಮೂಲ ಹುಡುಕಿ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಹಾಗೂ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಕಾಟನ್ ಪೇಟೆಯ ಅರಿಹಂತ್ ಟ್ರೇಡಿಂಗ್ ಕಂಪನಿ ಹೆಸರಿನ ಗೋದಾಮಿನ ಮೇಲೆ ದಾಳಿ ಮಾಡಿದ್ದರು. ಚಂದ್ರಪ್ರಕಾಶ್ ಎಂಬುವವರ ಹೆಸರಿನಲ್ಲಿರುವ ಗೋದಾಮಿನಲ್ಲಿ ಮೂಟೆಗಟ್ಟಲೇ ಅವಧಿ ಮೀರಿದ ಉತ್ಪನ್ನಗಳನ್ನ ಮರು ಪ್ಯಾಕಿಂಗ್ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಎಲ್ಲಾ ಉತ್ಪನ್ನಗಳ ಸ್ಯಾಂಪಲ್ಸ್ ಪಡೆದಿರುವ ಆಹಾರ ಸುರಕ್ಷತಾ ಅಧಿಕಾರಿಗಳು ಅವುಗಳನ್ನ ಪರಿಶೀಲನೆಗೆ ರವಾನಿಸಿದ್ದು, ಗೋದಾಮಿನ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.