ಕೋಲ್ಕತ್ತಾ: ದ್ವಿಪಕ್ಷೀಯ ಸಂಬಂಧಗಳು ಹಾಳಾಗಲು ಚೀನಾ ಕಾರಣವೇ ಹೊರತು ಭಾರತವಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಪ್ಪಾಳೆ ತಟ್ಟಲು ಎರಡು ಕೈಗಳು ಬೇಕಾಗುತ್ತವೆ. ಸಂಬಂಧ ಉಳಿಯಬೇಕಾದರೆ ಭಾರತದ ಒಂದು ಕೈ ಜೊತೆ ಚೀನಾ ಕೂಡ ನಂಬಿಕೆ ಇಡಬೇಕು. ಆಗ ಮಾತ್ರ ದ್ವಿಪಕ್ಷೀಯ ಸಂಬಂಧ ಸರಿಯಾದ ಮಾರ್ಗದಲ್ಲಿರುತ್ತದೆ ಎಂದಿದ್ದಾರೆ.
ಎರಡೂ ದೇಶಗಳ ಸಂಬಂಧ ದೊಡ್ಡ ಶಕ್ತಿಯಾಗಿ ಹೊರಹೊಮ್ಮುವಾಗ ಸ್ಥಿರತೆಯನ್ನು ಬಯಸುತ್ತದೆ. ಆ ಸ್ಥಿರತೆಯನ್ನು ಕಾಯ್ದುಕೊಳ್ಳದ ಹಿನ್ನಲೆ ಭಾರತ ಮತ್ತು ಚೀನಾ ಸಂಬಂಧ ಹಳಸಲು ಕಾರಣವಾಗಿದೆ. ಎರಡು ದೇಶಗಳ ಸಂಬಂಧಗಳು ಪರಸ್ಪರ ತಿಳುವಳಿಕೆಯನ್ನು ಹೊಂದಿರಬೇಕು ಎಂಬುದನ್ನು ಚೀನಾ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ಪ್ರಮುಖ ದೇಶಗಳ ನಡುವಿನ ಸಂಬಂಧಗಳು ಪರಸ್ಪರ ಆಸಕ್ತಿ, ಸೂಕ್ಷ್ಮತೆ ಮತ್ತು ಗೌರವವನ್ನು ಆಧರಿಸಿದ್ದಾಗ ಮಾತ್ರ ಅದು ಕೆಲಸ ಮಾಡುತ್ತದೆ. ಇದನ್ನು ಚೀನಾ ಅರ್ಥ ಮಾಡಿಕೊಂಡಿಲ್ಲ. ಗಡಿ ಪ್ರದೇಶಗಳಲ್ಲಿ ನಾವು ಕೆಲವು ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಎಲ್ಲಿ ಸಮಸ್ಯೆಗಳಿಲ್ಲ? ರಾಜತಾಂತ್ರಿಕತೆಯ ಮೂಲಕ ಬಗೆಹರಿಸಬೇಕು. ಅದನ್ನು ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.