ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮೊದಲ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲು ಒಂದೇ ದಿನ ಬಾಕಿ ಇದ್ದರೂ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕಗ್ಗಂಟಾಗಿಯೇ ಉಳಿದಿದ್ದು, ಭಾನುವಾರ ದೆಹಲಿಯಲ್ಲಿ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯುಂಟಾಗಿರುವ ಕಾರಣ ಪಕ್ಷದಲ್ಲಿ ಮುಖಂಡರ ನಡೆಯ ಬಗ್ಗೆ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಇದನ್ನು ಶಮನಗೊಳಿಸುವಲ್ಲಿಯೇ ಹರಸಾಹಸ ಮಾಡುತ್ತಿರುವ ವರಿಷ್ಠರು ಚುನಾವಣೆಯ ಫಲಿತಾಂಶ ಬಂದು ತಿಂಗಳು ಕಳೆದರೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲು ಒಮ್ಮತ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ.
ಸೋಮವಾರದಿಂದ ಅಧಿವೇಶನ ಪ್ರಾರಂಭವಾಗಲಿದೆ. ಈ ವೇಳೆ ಪಕ್ಷದ ಶಾಸಕಾಂಗ ನಾಯಕನ ಆಯ್ಕೆಯು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾಯಕನ ಆಯ್ಕೆಯತ್ತ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ. ಭಾನುವಾರ ದೆಹಲಿಯಲ್ಲಿ ಪಕ್ಷದ ವರಿಷ್ಠರ ಸಭೆ ನಡೆಯಲಿದೆ. ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ದೆಹಲಿಯಲ್ಲಿಯೇ ಭಾನುವಾರ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆಯಾದರೂ ಒಂದು ವೇಳೆ ಅಲ್ಲಿ ಘೋಷಣೆಯಾಗದಿದ್ದರೆ ಸೋಮವಾರ ಘೋಷಣೆಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಸೋಮವಾರ ಜಂಟಿ ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣ ಮಾತ್ರ ನಡೆಯಲಿದೆ. ಈ ಕಾರಣಕ್ಕಾಗಿ ಸೋಮವಾರ ಘೋಷಣೆ ಮಾಡುವ ಸಂಭವವೂ ಇದೆ ಎನ್ನಲಾಗಿದೆ.