ಬೆಂಗಳೂರು: ಚುನಾವಣಾ ಪೂರ್ವದಲ್ಲಿ ನುಡಿದಂತೆ ನಡೆಯದ ಕಾಂಗ್ರೆಸ್ ವಿರುದ್ಧ ಜುಲೈ 3 ರಂದು ಬಿಜೆಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಅಲ್ಲದೆ, ಗ್ಯಾರಂಟಿ ಯೋಜನೆಗಳಿಗೆ ಹಾಕಿದ ಷರತ್ತುಗಳನ್ನು ವಾಪಸ್ ಪಡೆಯುವಂತೆ ಸದನದ ಒಳಗೆ ಹಾಗೂ ಆಚೆಗೆ ಪ್ರತಿಭಟನೆ ಮಾಡಲು ಬಿಜೆಪಿ ತೀರ್ಮಾನಿಸಿದೆ. ಇನ್ನು ಈ ಬಗ್ಗೆ ಇಂದು(ಜುಲೈ 02) ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಡಾ. ಸಿಎನ್ ಅಶ್ವತ್ಥ್ ನಾರಾಯಣ, ನಾಳೆಯಿಂದ (ಜುಲೈ 03) ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ.
ಮೋಸ ನಿಲ್ಲಿಸಿ-ಗ್ಯಾರಂಟಿ ಜಾರಿಗೊಳಿಸಿ ಎಂಬ ಶೀರ್ಷಿಕೆ ಅಡಿ ಹೋರಾಟ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. ಜನರಿಗೆ ಗ್ಯಾರಂಟಿಗಳನ್ನು ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಜಾರಿಗೊಳಿಸುತ್ತೇವೆ. ಎಂದಿದ್ದರು. ಈಗ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತು ತಪ್ಪಿದೆ. ಸದನದ ಹೊರಗಡೆ ಮತ್ತು ಒಳಗಡೆ ಹೋರಾಟ ಮಾಡಲಿದ್ದೇವೆ. ಸದನದ ಹೊರಗಡೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಜು.4ರಂದು ಫ್ರೀಡಂಪಾರ್ಕ್ನಲ್ಲಿ ಹೋರಾಟ ಮಾಡುತ್ತಾರೆ ಎಂದು ಹೇಳಿದರು.