ದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥ ಹುದ್ದೆಗೆ ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್ ಅಜಿತ್ ಅಗರ್ಕರ್ ನೇಮಕವಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಮಾಧ್ಯಮವೊಂದರ ಸ್ಟ್ರಿಂಗ್ ಆಪರೇಷನ್ನಲ್ಲಿ ತಗಲಾಕಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮಾಜಿ ಸೆಲೆಕ್ಟರ್ ಚೇತನ್ ಶರ್ಮಾ ಅವರು ಫೆಬ್ರವರಿ 17 ರಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅಂದಿನಿಂದ ತೆರವಾಗಿದ್ದ ಚೀಫ್ ಸೆಲೆಕ್ಟರ್ ಹುದ್ದೆಯನ್ನು ತುಂಬಲು ಬಿಸಿಸಿಐ ಇತ್ತೀಚೆಗೆ ಅರ್ಜೆಗಳನ್ನು ಆಹ್ವಾನಿಸಿತ್ತು. ಜೂನ್ 30 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಜುಲೈ 1 ರಂದು ಅಭ್ಯರ್ಥಿಗಳ ಸಂದರ್ಶನ ನಡೆಸುವ ಸಾಧ್ಯತೆ ಇದೆ.
ಭಾರತ ತಂಡದ ಮಾಜಿ ವೇಗದ ಬೌಲಿಂಗ್ ಆಲ್ರೌಂಡರ್ ಅಜಿತ್ ಅಗರ್ಕರ್ ಮುಖ್ಯ ಆಯ್ಕೆದಾರ ಹುದ್ದೆಯ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಕೊನೆಯ ಬಾರಿಯೂ ಅಗರ್ಕರ್ ಇದೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇವರನ್ನು ಹಿಂದಿಕ್ಕಿ ಚೇತನ್ ಶರ್ಮಾ ಮುಖ್ಯಸ್ಥರಾಗಿದ್ದರು. ಈ ಬಾರಿಯೂ ಅರ್ಜಿ ಸಲ್ಲಿಸಿರುವ ಅಜಿತ್ ಅಗರ್ಕರ್ ಇಂಡಿಯನ್ ಪ್ರೀಮಿಯರ್ ಲೀಗ್ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ನ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಹಾಗಾಗಿ ಚೀಫ್ ಸೆಲೆಕ್ಟರ್ ಹುದ್ದೆಗೆ ಅಜಿತ್ ಅಗರ್ಕರ್ ಹೆಸರು ಅಂತಿಮವಾಗಿದೆ ಎಂದು ವರದಿಯಾಗಿದೆ.
ಮುಖ್ಯ ಆಯ್ಕೆಗಾರರ ಹುದ್ದೆಗೆ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಜುಲೈ 1 ರಂದು ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ನಡೆಸಲಿದೆ. ಆದರೆ, ಈ ಬಾರಿ ಅಜಿತ್ ಅಗರ್ಕರ್ ಬಿಸಿಸಿಐ ಆಯ್ಕೆ ಸಮಿತಿಗೆ ಚೀಫ್ ಸೆಲೆಕ್ಟರ್ ಆಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.