ದೆಹಲಿ: ಆಧುನಿಕ ಕ್ರಿಕೆಟ್ ನ ದಿಗ್ಗಜ ವಿರಾಟ್ ಕೊಹ್ಲಿಗೆ ಈಗಾಗಲೇ 35 ವರ್ಷವಾಗಿದ್ದು, ಬಹುಶಃ ಇದು ಅವರ ಕೊನೆಯ ಏಕದಿನ ವಿಶ್ವಕಪ್ ಟೂರ್ನಿಯಾಗಿದ್ದು ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಟ್ರೋಫಿ ಜಯಿಸಬೇಕೆಂದು ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದ ಅಂತಿಮ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಲವು ಮಾಜಿ ಕ್ರಿಕೆಟಿಗರು ಹೇಳಿರುವ ಬೆನ್ನಲ್ಲೇ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರು ವಿರಾಟ್ ಕೊಹ್ಲಿ ಅವರಲ್ಲಿ ಮತ್ತೊಂದು ವಿಶ್ವಕಪ್ ಆಡುವ ಶಕ್ತಿ ಅಡಗಿದೆ ಎಂದು ಗುಣಗಾಣ ಮಾಡಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ 209 ರನ್ಗಳ ಸೋಲು ಕಂಡು ಟ್ರೋಫಿ ಬರ ಮುಂದುವರೆಸಿದೆ. ಆದರೆ ಅಕ್ಟೋಬರ್ 5 ರಿಂದ ನವೆಂಬರ್ 19ರವರೆಗೆ ತವರಿನ ಅಂಗಣದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿ ಜಯಿಸಿ ಚಾಂಪಿಯನ್ ಪಟ್ಟ ಅಲಂಕರಿಸುವತ್ತ ರೋಹಿತ್ ಶರ್ಮಾ ಪಡೆ ದೃಷ್ಟಿ ಹರಿಸಿದೆ. ಟೀಮ್ ಇಂಡಿಯಾ ಟ್ರೋಫಿ ಗೆಲ್ಲಬೇಕಾದರೆ ರನ್ ಮಿಷನ್ ವಿರಾಟ್ ಕೊಹ್ಲಿ ಪ್ರಾಬಲ್ಯ ಮೆರೆಯಬೇಕಿದೆ.
ವೆಸ್ಟ್ ಇಂಡೀಸ್ ನ ಮಾಜಿ ಬ್ಯಾಟಿಂಗ್ ದೈತ್ಯ ಹಾಗೂ ಸ್ವಘೋಷಿತ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ್ದು, ವಿರಾಟ್ ಕೊಹ್ಲಿ ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದು, 2023ರ ಏಕದಿನ ವಿಶ್ವಕಪ್ ಟೂರ್ನಿಯ ನಂತರ ಮತ್ತೊಂದು 50 ಓವರ್ ಗಳ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
“ವಿರಾಟ್ ಕೊಹ್ಲಿ ಅವರಲ್ಲಿ ಮತ್ತೊಂದು ಏಕದಿನ ವಿಶ್ವಕಪ್ ಟೂರ್ನಿ ಆಡುವ ಶಕ್ತಿ ಅಡಗಿದೆ. ಮುಂಬರುವ ಏಕದಿನ ವಿಶ್ವಕಪ್ ಟೂರ್ನಿ ಅವರ ವೃತ್ತಿ ಜೀವನದ ಕೊನೆಯ ಟೂರ್ನಿ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ತವರಿನಂಗಳದಲ್ಲಿ ಮಹಾಟೂರ್ನಿ ಆಯೋಜನೆಗೊಂಡಿದ್ದು ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದ್ದರಿಂದ ಈ ಬಾರಿಯ ಮಹಾಕದನವು ಸಾಕಷ್ಟು ಕುತೂಹಲದಿಂದ ಕೂಡಿರುತ್ತದೆ. ಟೀಮ್ ಇಂಡಿಯಾ ಆಯ್ಕೆ ಮಾಡುವ ತಂಡವನ್ನು ನೋಡಲು ನಾನು ಉತ್ಸುಕನಾಗಿದ್ದೇನೆ,” ಎಂದು ಕ್ರಿಸ್ ಗೇಲ್ ಹೇಳಿದ್ದಾರೆ.