ಮಂಗಳೂರು : ಮಂಗಳೂರಿನ ನಂತೂರು, ಕೆಪಿಟಿ ಹಾಗೂ ಕೂಳೂರುಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿಗೆ ಅಡೆತಡೆಯಾಗಿರುವ ಪರಿಕರಗಳನ್ನು ಕೂಡಲೇ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು. ಇನ್ನು ಒಂದು ವಾರದಲ್ಲಿ ಇಲ್ಲಿ ಕಾಮಗಾರಿ ಆರಂಭಿಸುವಂತೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೆದ್ದಾರಿ ಇಲಾಖಾ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಪಾಲನಾ ವರದಿ ವೇಳೆ ವಿವಿಧ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪ್ರಸ್ತಾಪಿಸಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಇಲಾಖೆ(ಎನ್ಎಚ್ಐಎ) ಎಂಜಿನಿಯರ್ ಅನಿರುದ್ಧ ಕಾಮತ್, ಬಿ.ಸಿ.ರೋಡ್-ಪೆರಿಯಶಾಂತಿ ಹೆದ್ದಾರಿಯಲ್ಲಿ 48.48 ಕಿ.ಮೀ. ಪೈಕಿ 14.2 ಕಿ.ಮೀ. ಕಾಮಗಾರಿ ಮುಕ್ತಾಯವಾಗಿದ್ದು, ಶೇ.31.4 ಪ್ರಗತಿ ಆಗಿದೆ. ಪೆರಿಯಶಾಂತಿ-ಅಡ್ಡಹೊಳೆಯ 8.5 ಕಿ.ಮೀ. ಕಾಮಗಾರಿ ಮುಗಿದಿದ್ದು, ಶೇ.61 ಪ್ರಗತಿ ಆಗಿದೆ. ಈ ಕಾಮಗಾರಿಗಳು 2023ರ ಡಿಸೆಂಬರ್ಗೆ ಮುಕ್ತಾಯಗೊಳ್ಳಲಿದೆ.
ಕಲ್ಲಡ್ಕದಲ್ಲಿ ಮೇಲ್ಸೇತುವೆ ಕಾಮಗಾರಿ ಶೇ.34ರಷ್ಟುಮುಕ್ತಾಯವಾಗಿದ್ದು, 2024ರ ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕುಲಶೇಖರ-ಸಾಣೂರು ಹೆದ್ದಾರಿ ಕಾಮಗಾರಿ ಶೇ.21ರಷ್ಟುಆಗಿದೆ, ಇಲ್ಲಿ 48 ಕಿ.ಮೀ. ಪೈಕಿ 15 ಕಿ.ಮೀ. ಕಾಮಗಾರಿ ಪೂರ್ತಿಯಾಗಿದ್ದು, 2024 ಅಕ್ಟೋಬರ್ ವೇಳೆಗೆ ಪೂರ್ತಿಯಾಗಲಿದೆ. ಆದರೆ ಹೆದ್ದಾರಿಯಲ್ಲಿರುವ ವಿದ್ಯುತ್ ಲೈನ್ ಮತ್ತಿತರ ಪರಿಕರಗಳ ಹಸ್ತಾಂತರಗೊಳ್ಳದೆ, ಭೂಸ್ವಾಧೀನ ಸಮಸ್ಯೆಯಿಂದ ನಂತೂರು, ಕೆಪಿಟಿ, ಕೂಳೂರುಗಳಲ್ಲಿ ಕಾಮಗಾರಿ ನಡೆಸಲು ಕಷ್ಟವಾಗಿದೆ ಎಂದರು.