ಮೈಸೂರು : ಔರಾದ್ಕರ್ ವರದಿ ಯಥಾವತ್ ಜಾರಿ ಕಷ್ಟ. ಪೊಲೀಸರಿಗೆ ವಾರದ ರಜೆ ಕೊಡಬೇಕು. ಅದನ್ನು ಅನುಷ್ಠಾನ ಮಾಡುತ್ತೇನೆ. ರಾತ್ರಿ ಪಾಳಿ ಮಾಡಿದವರಿಗೆ ವಿಶೇಷ ಭತ್ಯೆ ಕೊಡುವ ವಿಚಾರದಲ್ಲೂ ಆದಷ್ಟು ಬೇಗ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆ ಖಾಲಿ ಇದೆ. ಮೊದಲ ಹಂತದಲ್ಲಿ 4 ಸಾವಿರ ಪೊಲೀಸ್ ಪೇದೆ, 400 ಸಬ್ ಇನ್ಸ್ಪೆಕ್ಟರ್ ಹುದ್ದೆ ಭರ್ತಿ ಮಾಡುವುದಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
ಸಬ್ ಇನ್ಸ್ಪೆಕ್ಟರ್ ಹುದ್ದೆ ನೇಮಕಾತಿ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಕ್ರಮ ಕುರಿತ ವಿಚಾರಣೆಯಲ್ಲಿ ನ್ಯಾಯಾಲಯ ಸರ್ಕಾರದ ಅಭಿಪ್ರಾಯ ಕೇಳಿದೆ. ನ್ಯಾಯಾಲಯಕ್ಕೆ ಜುಲೈ 5 ರಂದು ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದರು. ರಾಜ್ಯದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆ ಖಾಲಿ ಇವೆ. ಅದನ್ನು ಭರ್ತಿ ಮಾಡುವ ಕಾರ್ಯ ಶುರುವಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು.