ಬೆಂಗಳೂರು ;- ಕಾಲಕೂಡಿ ಬಂದಾಗ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನ ಜೆಪಿ ಭವನದಲ್ಲಿ ಮಾತನಾಡಿದ ಅವರು, ಕಾಲವೂ ಕೂಡಿ ಬರುತ್ತದೆ, ರಾಜ್ಯದಲ್ಲಿ ಜೆಡಿಎಸ್ ಸರಕಾರವೂ ಬರುತ್ತದೆ. ಪಕ್ಷದಲ್ಲಿ ನಿಷ್ಠರಾಗಿ ಉಳಿಯುವ ಎಲ್ಲರಿಗೂ ಅಧಿಕಾರ, ಜನರ ಸೇವೆ ಮಾಡುವ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.
ವಿಧಾನಮಂಡಲ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಸಮರ್ಥವಾಗಿ ಎದುರಿಸುವ ಕುರಿತು ಶಾಸಕರಿಗೆ ಟಿಪ್ಸ್ ನೀಡಿದ ಎಚ್ಡಿಡಿ ಪತಿಕ್ರೆಗಳನ್ನು ಗಂಭೀರವಾಗಿ ಓದುವಂತೆ, ಸುದ್ದಿ ಮಾಧ್ಯಮಗಳನ್ನು ಗಮನಿಸುವಂತೆ ಸಲಹೆ ನೀಡಿದ್ದಾರೆ.
ಜನರ ಸಮಸ್ಯೆಗಳನ್ನು ಸರಕಾರದ ಮುಖಕ್ಕೆ ಹಿಡಿಯಿರಿ. ಹೋರಾಡುವುದಕ್ಕೆ ಅಂಜಿಕೆ, ಅಳಲು ಏಕೆ. ಇವತ್ತಿನ ರಾಜ್ಯ ಮತ್ತು ದೇಶದ ರಾಜಕಾರಣ ಗೊಂದಲಮಯವಾಗಿದೆ. ನಾವು ಜನನಿಷ್ಠರಾಗಿ ಅವರ ಜತೆ ನಿಲ್ಲೋಣ ಎಂದು ಶಾಸಕರನ್ನು ಹುರಿದುಂಬಿಸಿದ್ದಾರೆ.
ಯಾರೂ ಎದೆಗುಂದಬೇಕಿಲ್ಲ. ಪಕ್ಷ ಕಟ್ಟಿ. ಸೋಲಿನಿಂದ ಹತಾಶರಾಗುವುದು ಬೇಡ. ಛಲವಿದ್ದರೆ ಗೆಲುವು ಖಚಿತ. ಅಧೈರ್ಯವೇ ಅವಸಾನಕ್ಕೆ ನಾಂದಿ ಆಗುತ್ತದೆ ಎಚ್ಚರ ಇರಲಿ. ಪಕ್ಷವನ್ನು ಉಳಿಸಲೇಬೇಕು, ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಮಾಡೋಣ ಎಂದು ಹೇಳಿದ್ದಾರೆ.