ಬೆಂಗಳೂರು ;- ಚಾಮರಾಜನಗರಕ್ಕೆ ಹೋದರೆ ಸಿಎಂ ಕುರ್ಚಿ ಹೋಗುತ್ತದೆ ಎಂಬ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚಾಮರಾಜನಗರಕ್ಕೆ ಹೋದರೆ ಸಿಎಂ ಕುರ್ಚಿ ಹೋಗುತ್ತದೆ ಎನ್ನುವ ಮೌಢ್ಯವನ್ನು ವಿದ್ಯಾವಂತರೇ ಹೆಚ್ಚು ನಂಬುತ್ತಾರೆ.
ನಾನು 12 ಬಾರಿ ಚಾಮರಾಜನಗರಕ್ಕೆ ಹೋಗಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಬಸವಣ್ಣನವರು 12ನೇ ಶತಮಾನದಲ್ಲೇ ಇಂಥ ಮೌಢ್ಯ ಮತ್ತು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದರು. ಜಾಗೃತಿ ಮೂಡಿಸಿದ್ದರು ಎಂದು ತಿಳಿಸಿದರು.
ಎಲ್ಲರಿಗೂ ಶಿಕ್ಷಣ ದೊರೆತರೆ ಜಾತಿ ವ್ಯವಸ್ಥೆ ಹೋಗುತ್ತದೆ ಎಂದುಕೊಂಡಿದ್ದೆ. ಆದರೆ ಅದು ಆಗುತ್ತಿಲ್ಲ. ಶಿಕ್ಷಣ ದೊರೆತರೆ ಜಾತಿ, ಮೌಢ್ಯ ಹೋಗುತ್ತದೆ ಎನ್ನುವ ಮಾತು ಸುಳ್ಳಾಗಿದೆ. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಬಹಳ ಆಳವಾಗಿ ಬೇರುಬಿಟ್ಟಿದೆ. ಯಾವ ಸಮಾಜದಲ್ಲಿ ಚಲನೆಯಿರುವುದಿಲ್ಲವೋ ಆಗ ವ್ಯವಸ್ಥೆ ಬದಲಾವಣೆಯಾಗುವುದಿಲ್ಲ. ಇಂದು ವಿದ್ಯಾವಂತರೂ ಜಾತಿ ವ್ಯವಸ್ಥೆಗೆ ಈಡಾಗುತ್ತಿರುವುದು ಬೇಸರದ ಸಂಗತಿಯಾಗಿದೆ.
ವಿದ್ಯೆ ಜ್ಞಾನದ ವಿಕಾಸಕ್ಕೆ ಕಾರಣವಾಗಬೇಕು. ಆದರೆ ಸಂಕುಚಿತ ಭಾವನೆ ಹೆಚ್ಚಾಗುತ್ತಿದೆ. ಕುವೆಂಪು ಅವರು ಹೇಳಿದಂತೆ ಹುಟ್ಟುವಾಗ ಪ್ರತಿ ಮಾನವ ವಿಶ್ವ ಮಾನವನಾಗಿರುತ್ತಾನೆ ಬೆಳೆಯುತ್ತಾ ಅಲ್ಪ ಮಾನವನಾಗುತ್ತಿದ್ದಾನೆ ಎಂದು ಸಿಎಂ ಸಿದ್ದರಾಮಯ್ಯ ವಿಷಾದಿಸಿದರು.