ಭೋಪಾಲ್: ಪುರುಷ ಮತ್ತು ಮಹಿಳೆ ನಡುವಿನ ಸಹಮತದ ಲೈಂಗಿಕ ಸಂಬಂಧಕ್ಕೆ ಅಧಿಕೃತ ವಯಸ್ಸಿನ ಮಿತಿಯನ್ನು ಸದ್ಯ ಇರುವ 18 ವರ್ಷದಿಂದ 16 ವರ್ಷಕ್ಕೆ ಕೇಂದ್ರ ಸರಕಾರವು ಇಳಿಕೆ ಮಾಡುವುದು ಉತ್ತಮ ಎಂದು ಮಧ್ಯಪ್ರದೇಶ ಹೈಕೋರ್ಟ್ನ ಗ್ವಾಲಿಯರ್ ವಿಭಾಗೀಯ ಪೀಠವು ಸಲಹೆ ನೀಡಿದೆ.
2020ರ ಜುಲೈನಲ್ಲಿ ಜರುಗಿದ ಲೈಂಗಿಕ ದೌರ್ಜನ್ಯ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ದೀಪಕ್ ಕುಮಾರ್ ಅಗರವಾಲ್ ಅವರು ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
” ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವ ಹಾಗೂ ಸದಾಕಾಲ ಇಂಟರ್ನೆಟ್ ಬಳಕೆಯ ಅನುಕೂಲದಿಂದಾಗಿ ಗಂಡು ಮತ್ತು ಹೆಣ್ಣುಮಕ್ಕಳು 14 ವರ್ಷಕ್ಕೆ ಪ್ರೌಢಾವಸ್ಥೆ ತಲುಪುತ್ತಿದ್ದಾರೆ. ಸದ್ಯದ ಸಾಮಾಜಿಕ ಸ್ಥಿತಿಗತಿಯ ವಾಸ್ತವಾಂಶವಿದು. ಹೀಗಾಗಿ ಸಣ್ಣ ವಯಸ್ಸಿಗೆ ಪ್ರಕೃತಿ ಸಹಜವಾದ ಪುರುಷ ಹಾಗೂ ಮಹಿಳೆ ನಡುವಿನ ಆಕರ್ಷಣೆಗೆ ಒಳಗಾಗುತ್ತಿದ್ದಾರೆ.
ಹಾಗಂತ ಎಲ್ಲ ಪ್ರಕರಣಗಳಲ್ಲಿ ಪುರುಷ ಅಥವಾ ಯುವಕನೇ ಅಪರಾಧಿ ಎಂದು ಹೇಳಲಾಗಲ್ಲ. ಹೆಚ್ಚುತ್ತಿರುವ ಅಪ್ರಾಪ್ತ ವಯಸ್ಕರ ಸಂಬಂಧಿತ ಅಪರಾಧ ಪ್ರಕರಣಗಳನ್ನು ಗಮನದಲ್ಲಿ ಇರಿಸಿಕೊಂಡು ಭಾರತೀಯ ದಂಡ ಸಂಹಿತೆಯಲ್ಲಿ ಮಹತ್ವದ ತಿದ್ದುಪಡಿಯ ಅಗತ್ಯವಿದೆ ಎಂದು ಭಾವಿಸಿದ್ದೇನೆ,” ಎಂದು ನ್ಯಾ. ಅಗರವಾಲ್ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಹಾಗೂ ಐಟಿ ಕಾಯ್ದೆ ಅಡಿ ದಾಖಲಿಸಲಾದ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ರಾಹುಲ್ ಚಾಂಡೆಲ್ ಜಾತವ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾ ಅಗರವಾಲ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.