ಗಾಂಧಿನಗರ: ಅನ್ಯ ಜಾತಿಯ ಹುಡುಗನನ್ನ ಪ್ರೀತಿಸಿ ಮದುವೆಯಾಗಿದ್ದಕ್ಕೆ (Marriage) ವ್ಯಕ್ತಿಯೊಬ್ಬ ಬದುಕಿದ್ದಾಗಲೇ ತನ್ನ ಮಗಳ ಅಂತ್ಯ ಸಂಸ್ಕಾರ ನೆರವೇರಿಸಿದ ವಿಚಿತ್ರ ಘಟನೆ ಗುಜರಾತಿನ (Gujarat) ದಾಹೋದ್ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಗರ್ಬಡಾ ಗ್ರಾಮದ ನಿವಾಸಿಯೊಬ್ಬರ ಮಗಳು ಒಂದು ತಿಂಗಳ ಹಿಂದೆ ಅನ್ಯಜಾತಿಯ ಯುವಕನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಈ ವಿಷಯ ತಿಳಿದ ಯುವತಿಯ ತಂದೆ ಬದುಕಿದ್ದಾಗಲೇ ತನ್ನ ಮಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ.
ಏನಿದು ಲವ್ ಸ್ಟೋರಿ?
ಒಂದು ತಿಂಗಳ ಹಿಂದೆ ತಮ್ಮ ಮಗಳು ಮನೆಯಿಂದ ಹೊರಗೆ ಹೋದವಳು ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಗ್ರಾಮಸ್ಥರಿಗೆಲ್ಲಾ ವಿಷಯ ಮುಟ್ಟಿಸಿ ಹುಡುಕಾಟ ನಡೆಸಿದ್ದರು. ಎಷ್ಟು ಹುಡುಕಾಡಿದರೂ ಸಿಗದಿದ್ದಾಗ ಸ್ಥಳೀಯ ಪೊಲೀಸ್ (Gujarat Police) ಠಾಣೆಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ (Investigation) ನಡೆಸಿದ್ದ ಪೊಲೀಸರು ಮಗಳನ್ನು ಪತ್ತೆ ಮಾಡಿದಾಗ ಆಕೆ ಅನ್ಯ ಜಾತಿಯ ಹುಡುಗನ್ನ ಪ್ರೀತಿಸಿ ಮದುವೆಯಾಗಿರುವುದು ಕಂಡುಬಂದಿತು.
ಪೋಷಕರು ಮಗಳನ್ನು ಪರಿಪರಿಯಾಗಿ ಬೇಡಿಕೊಂಡರೂ ಆಕೆ ಹಿಂದಿರುಗಲು ಒಪ್ಪಲಿಲ್ಲ. ಅಲ್ಲದೇ ಪೊಲೀಸ್ ವಿಚಾರಣೆಯಲ್ಲೂ ತಾನೂ ವಯಸ್ಕಳಾಗಿದ್ದೇನೆ, ಇಷ್ಟಪಟ್ಟವರನ್ನ ಆಯ್ಕೆ ಮಾಡಿಕೊಳ್ಳುವ ಹಕ್ಕು, ಸ್ವಾತಂತ್ರ್ಯ ಇದೆ ಅಂತಾ ಖಡಕ್ಕಾಗಿ ವಾದಿಸಿದ್ದಳು. ಹಾಗಾಗಿ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ
ನಂತರ ಮಗಳನ್ನು ತನ್ನ ಪಾಡಿಗೆ ಬಿಟ್ಟು ಕುಟುಂಬಸ್ಥರೊಂದಿಗೆ ಮನೆಗೆ ಹಿಂದಿರುಗಿದ ತಂದೆ ಅಂತ್ಯ ಸಂಸ್ಕಾರ ನೆರವೇರಿಸಿ ಮಗಳಜೊತೆಗಿನ ಸಂಬಂಧವನ್ನ ಮುರಿದುಕೊಂಡಿದ್ದಾನೆ. ಇನ್ನು ಅವಳು ನನ್ನ ಪಾಲಿಗೆ ಸತ್ತು ಹೋಗಿದ್ದಾಳೆ, ನನಗು-ಅವಳಿಗು ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಲೆ ಬೋಳಿಸಿಕೊಂಡು ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನ ನೆರವೇರಿಸಿದ್ದಾನೆ.