ಬೆಂಗಳೂರು: ಚಾಮರಾಜನಗರಕ್ಕೆ ಹೋದರೆ ಸಿಎಂ ಕುರ್ಚಿ ಹೋಗುತ್ತದೆ ಎಂಬ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು ಚಾಮರಾಜನಗರಕ್ಕೆ ಹೋದರೆ ಸಿಎಂ ಕುರ್ಚಿ ಹೋಗುತ್ತದೆ ಎನ್ನುವ ಮೌಡ್ಯವನ್ನು ವಿದ್ಯಾವಂತರೇ ಹೆಚ್ಚು ನಂಬುತ್ತಾರೆ. ನಾನು 12 ಬಾರಿ ಚಾಮರಾಜನಗರಕ್ಕೆ ಹೋಗಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದೇನೆ.”
ಬಸವಣ್ಣನವರು 12ನೇ ಶತಮಾನದಲ್ಲೇ ಇಂಥಾ ಮೌಡ್ಯ ಮತ್ತು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದರು. ಜಾಗೃತಿ ಮೂಡಿಸಿದ್ದರು. ಶಿಕ್ಷಣ ದೊರೆತರೆ ಜಾತಿ, ಮೌಡ್ಯ ಹೋಗುತ್ತದೆ ಎನ್ನುವ ಮಾತು ಸುಳ್ಳಾಗಿದೆ ಎಂದರು.
ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಡಾ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಯೋಜಿಸಿದ್ದ “ನೀನಲ್ಲದೆ ಮತ್ತಾರೂ ಇಲ್ಲವಯ್ಯಾ” ದೇಶದ ಪ್ರಥಮ ವಚನ ಸಾಂಸ್ಕೃತಿಕ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಜಾತಿಮುಕ್ತ ಸಮಾಜ ನಿರ್ಮಾಣ ಆಗಬೇಕು ಎನ್ನುವ ಬಸವಣ್ಣನವರ ಆಶಯ ಇನ್ನೂ ಈಡೇರಿಲ್ಲ. ವಿದ್ಯಾವಂತರಲ್ಲೇ ಜಾತಿ ತಾರತಮ್ಯ ಹೆಚ್ಚುತ್ತಿದೆ. ಬಸವಣ್ಣನವರು ಕನಸು ಕಂಡಿದ್ದ ಸಮಾಜ ನಿರ್ಮಾಣ ಆಗಬೇಕು. ಕಾಯಕ ಮತ್ತು ದಾಸೋಹ ಮೌಲ್ಯಗಳು ಹೆಚ್ಚಬೇಕು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ವಿತರಣೆ. ಹೀಗೆ ಸಮಾಜದ ಉತ್ಪಾದನೆ, ಸಮಾಜದ ಎಲ್ಲರಿಗೂ ವಿತರಣೆ ಆಗಬೇಕು ಎನ್ನುವುದು ಬಸವಣ್ಣನವರ ಆಶಯವಾಗಿತ್ತು ಈಗ ನಮ್ಮ ಸರ್ಕಾರದ ಆಶಯ ಕೂಡ ಇದೇ ಆಗಿದೆ.