ಹಾಸನ: ಹಾಸನ ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ಐಸಿಯು ವಾರ್ಡ್ನಲ್ಲಿ ಶಾರ್ಟ್ಸರ್ಕ್ಯೂಟ್ ಉಂಟಾಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಈ ಘಟನೆಯಿಂದ ಜನರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೂಡಲೇ ಐಸಿಯುನಲ್ಲಿದ್ದ 24 ನವಜಾತ ಶಿಶುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಕೋಣೆಯೊಳಗೆ ಹೊಗೆ ತುಂಬಿಕೊಂಡಿದ್ದು, ಆಸ್ಪತ್ರೆ ಸಿಬ್ಬಂದಿ ಕಿಟಕಿ ಗಾಜುಗಳನ್ನು ಒಡೆದು ಮಕ್ಕಳನ್ನು ರಕ್ಷಿಸಿದ್ದಾರೆ. ಐಸಿಯುನಿಂದ ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಬಳಿಕ ನವಜಾತ ಶಿಶುಗಳ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಐಸಿಯುನಲ್ಲಿದ್ದ ಎಲ್ಲಾ 24 ನವಜಾತ ಶಿಶುಗಳು ಸುರಕ್ಷಿತವಾಗಿದ್ದು, ಸ್ಥಳಕ್ಕೆ ಹಿಮ್ಸ್ನ ನಿರ್ದೇಶಕ ರವಿಕುಮಾರ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಕೃಷ್ಣಮೂರ್ತಿ ಭೇಟಿ ನೀಡಿದ್ದಾರೆ. ಅಲ್ಲದೇ ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಜನರಲ್ಲಿ ಮನವಿ ಮಾಡಿದ್ದಾರೆ.