ಬೆಂಗಳೂರು: ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಪರಿಷತ್ ಸದಸ್ಯ ಟಿ.ಎ.ಶರವಣ ಕೂಡ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಕಚೇರಿಯಲ್ಲಿ ಹಣ ತರುವಂತೆ ಬೇಡಿಕೆ ಇಡುತ್ತಾರೆ. ಶಾಸಕರ ಶಿಫಾರಸು ತಂದ್ರೆ ಸಾಲದು 30 ಲಕ್ಷ ದುಡ್ಡು ತನ್ನಿ ಅಂತಾರೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ ಏನು ಭರವಸೆ ಕೊಟ್ರಿ. ಆ ಭರವಸೆಗಳನ್ನು ಯಾವ ರೀತಿ ಈಡೇರಿಸಲು ಹೊರಟ್ಟಿದ್ದೀರಿ. ಈ ಸರ್ಕಾರ ICUಗೆ ಹೋಗುವ ಕಾಲ ಬರುತ್ತೆ ಎಂದು ಅನಿಸುತ್ತೆ. ಐಸಿಯು, ವೆಂಟಿಲೇಟರ್ ಮೇಲೆ ಈ ಸರ್ಕಾರ ನಡೆಯಬಹುದು. ಆರ್ಥಿಕ ಪರಿಸ್ಥಿತಿ ಆ ಮಟ್ಟಕ್ಕೆ ಹೋಗಲಿದೆ. ಮುಂದಿನ 5 ವರ್ಷಕ್ಕೆ ಏನು ಕೊಡಬೇಕೆಂಬ ಆತ್ಮವಿಶ್ವಾಸವೇ ಇಲ್ಲ. ರಾಜ್ಯಪಾಲರ ಭಾಷಣ ವೇಳೆ ಶಾಸಕರು ಮೇಜು ಕುಟ್ಟಿದ್ದು ನೋಡಿಲ್ಲ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.