ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ವಸತಿ ಯೋಜನೆ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಸುಳ್ಳು ಅಭಿಯಾನ ಆರಂಭ ಮಾಡಿದ್ದಾರೆ. ಸುಳ್ಳು ಪ್ರಚಾರದಿಂದ ಗೆದ್ದ ಮೇಲೆ ಅಭಿವೃದ್ಧಿ ಮೇಲೆ ಲಕ್ಷ್ಯ ಕೊಡ್ತಾರೆ ಎಂದು ಭಾವಿಸಿದ್ದೆ. ಆದರೆ ಶಾಸಕ ಪ್ರದೀಪ್ ಈಶ್ವರ್ಗೆ ಸುಳ್ಳೆ ಮನೆ ದೇವರಾಗಿದೆ ಎಂದು ಮಾಜಿ ಸಚಿವ ಸುಧಾಕರ್ (K Sudhakar) ಕಿಡಿಕಾರಿದ್ದಾರೆ.
ಕ್ಷೇತ್ರದಲ್ಲಿ ನಿವೇಶನಗಳು ಆಗೇ ಇಲ್ಲ ಎನ್ನುವ ಹಾಗೆ ಬಡವರ ಆಸೆಗೆ ತಣ್ಣೀರು ಎರಚುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ಸುಳ್ಳಿನ ಯೋಜನೆ ತಂದಿಲ್ಲ. ಕಣ್ಣಿಗೆ ಕಂಡಿರುವ ಯೋಜನೆ ತಂದಿದ್ದೇನೆ. ರಾಜ್ಯದಲ್ಲೇ 20,000ಕ್ಕೂ ಹೆಚ್ಚು ನಿವೇಶನ ತಂದ ಏಕೈಕ ವ್ಯಕ್ತಿ ನಾನು. ಇದನ್ನು ತಿಳಿದುಕೊಳ್ಳಲಿ ಎಂದರು.
ಎಲ್ಲದಕ್ಕೂ ಆದೇಶ ಪತ್ರಗಳಿವೆ. 555 ಎಕರೆ ಜಮೀನು ಮಂಜೂರಾತಿ ಆಗಿದೆ. ನಾನೇ ಖುದ್ದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಫಲಾನುಭವಿಗಳ ಆಯ್ಕೆ ಮಾಡಿದ್ದೇನೆ. ಆಗ ಆಧಿಕಾರಿಗಳು ಏನು ಮಾಡುತ್ತಿದ್ದರು? ಶಾಸಕ ಪ್ರದೀಪ್ ಈಶ್ವರ್ ಹಕ್ಕು ಪತ್ರ ಯಾವುದು, ಮಂಜೂರಾತಿ ಪತ್ರ ಯಾವುದು ಎಂಬುದು ಏನು ಅಂತನೇ ತಿಳಿದುಕೊಂಡಿಲ್ಲ. ಬೇಸಿಕ್ ಸೆನ್ಸ್ ಇಲ್ಲ, ಸಿನಿಮಾ ಡೈಲಾಗ್ ಹೊಡೆದುಕೊಂಡ್ರೆ ರಾಜಕಾರಣ ನಡೆಯಲ್ಲ ಎಂದು ಕಾಲೆಳೆದರು.