ಪ್ರಭಾಸ್ ನಟನೆಯ ಆದಿ ಪುರುಷ ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಕುಲದೀಪ್ ತಿವಾರಿ ಹಾಗೂ ನವೀನ್ ಧವನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ನಡೆಸಿದ ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾನ್ ಮತ್ತು ಪ್ರಕಾಶ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠ ಜುಲೈ 27ಕ್ಕೆ ಸಿನಿಮಾದ ನಿರ್ದೇಶಕ ಓಂ ರಾವುತ್, ನಿರ್ಮಾಪಕ ಭೂಷಣ್ ಕುಮಾರ್ ಹಾಗೂ ಬರಹಗಾರ ಮನೋಜ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಆದಿಪುರುಷ್ ಸಿನಿಮಾವೂ ಸಾರ್ವಜನಿಕರ ಭಾವನೆಗೆ ಧಕ್ಕೆ ತರುವಂತಿದೆಯೇ ಎಂದು ಪರಿಶೀಲಿಸಿದ ಐವರು ಸದಸ್ಯರಿರುವ ಸಮಿತಿಯನ್ನು ನೇಮಿಸಬೇಕು ಎಂದು ಸರಕಾರಕ್ಕೂ ಹೈಕೋರ್ಟ್ ಸೂಚನೆ ನೀಡಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ನೀಡಿರುವ ಪ್ರಮಾಣಪತ್ರವನ್ನು ಮರುಪರಿಶೀಲಿಸಲು ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.
ಆರಂಭದಿಂದಲೂ ವಿವಾದದ ಮೂಲಕವೇ ತೆರೆಗೆ ಬಂದ ಆದಿಪುರುಷ್ ಸಿನಿಮಾ ವಾರದಲ್ಲೇ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಈಗಾಗಲೇ ಸಾಕಷ್ಟು ಕಡೆಗಳಲ್ಲಿ ಆದಿಪುರುಷ್ ಸಿನಿಮಾವನ್ನು ಎತ್ತಂಗಡಿ ಮಾಡಲಾಗಿದೆ. ಆದರೂ ಈ ಸಿನಿಮಾದ ಮೇಲಿನ ಚರ್ಚೆಗಳು ಮಾತ್ರ ಇನ್ನೂ ನಿಂತಿಲ್ಲ. ಚಿತ್ರದ ಕುರಿತು ಸಾಕಷ್ಟು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಗಳು ಚಿತ್ರದ ಚಿಂತನೆಯನ್ನು ಗಂಭೀರವಾಗಿ ತಗೆದುಕೊಂಡಿವೆ. ಹೀಗಾಗಿ ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗುತ್ತಲೇ ಇದೆ.
ಆದಿಪುರುಷ ಸಿನಿಮಾದ ಚಿತ್ರಕಥೆ ಮತ್ತು ಸಂಭಾಷಣೆ ಕುರಿತಂತೆ ಸಲ್ಲಿಸಲಾದ ಅರ್ಜಿಯನ್ನು ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟಿನ (High Court) ಲಕ್ನೋ ಪೀಠವು ಚಿತ್ರತಂಡದ ಜೊತೆ ಸೆನ್ಸಾರ್ ಮಂಡಳಿಯನ್ನು ತೀವ್ರವಾಗಿ ಟೀಕಿಸಿದೆ. ‘ಭಾರತೀಯರು ಸಂಹಿಷ್ಟುಗಳು ಎನ್ನುವ ಕಾರಣಕ್ಕೆ ಸಹನೆ ಪರೀಕ್ಷೆ ಮಾಡಲಾಗುತ್ತಿದೆಯೇ?’ ಎಂದು ಪ್ರಶ್ನೆ ಮಾಡಿದೆ.