ಕೂಡ್ಲಿಗಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಡೇಲಡಕು ದೊಡ್ಡಗೊಲ್ಲರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ 34ಕ್ಕೂ ಹೆಚ್ಚು ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಇವರನ್ನು ದಾಖಲಿಸಲಾಗಿತ್ತು. ಈ ಪೈಕಿ, 14 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಶನಿವಾರ ರಾತ್ರಿ ಮತ್ತು ಭಾನುವಾರ 10 ಜನರು ವಾಂತಿ-ಭೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತೆ 2ऺ ಮಂದಿಯಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಪೈಪ್ಲೈನ್ 3-4 ಕಡೆ ಒಡೆದಿದೆ.
ಇತ್ತೀಚೆಗೆ ಮಳೆ ಬಂದಿದ್ದರಿಂದ ಒಡೆದಿರುವ ಪೈಪ್ನಲ್ಲಿ ಕಲ್ಮಶ ಸೇರಿಕೊಂಡು ಕಲುಷಿತ ನೀರು ಸರಬರಾಜಾಗುತ್ತಿದೆ. ಈ ನೀರು ಸೇವನೆಯಿಂದ ವಾಂತಿ-ಭೇದಿ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮಕ್ಕೆ ಪೂರೈಸಲಾಗಿರುವ ನೀರನ್ನು ಬಳ್ಳಾರಿಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ, ಈ ನೀರು ಕುಡಿಯಲು ಯೋಗ್ಯವಾಗಿದೆಯೋ?, ಇಲ್ಲವೋ? ಎಂದು ಹೇಳಬಹುದಾಗಿದೆ ಎಂದು ತಾಲೂಕಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.