ಮುಂಬಯಿ: ರಾಜ್ಯ ರಾಜಕೀಯದಲ್ಲಿ ಬದಲಾದ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ಅವರು ಬಿಜೆಪಿ-ಶಿವಸೇನೆ ಮೈತ್ರಿಕೂಟದೊಂದಿಗೆ ಏಕೆ ಕೈಜೋಡಿಸಿದರು ಎಂಬುದನ್ನು ವಿವರಿಸಿದರು.
ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಪ್ರಗತಿಯತ್ತ ಕೊಂಡೊಯ್ದಿದ್ದಾರೆ. ಅವರ ಮೇಲೆ ನಂಬಿಕೆ ಇಟ್ಟ ನಾನು ಹಾಗೂ ಇತರ ಬಂಡಾಯ ಎನ್ಸಿಪಿ ನಾಯಕರು ಶಿಂಧೆ ಸರ್ಕಾರವನ್ನು ಸೇರಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ದೇಶದ ಅಭಿವೃದ್ಧಿಯತ್ತ ವಿಪಕ್ಷಗಳಿಗಿಲ್ಲ ಗಮನ
ಇದೇ ಸಂದರ್ಭದಲ್ಲಿ ಅಜಿತ್ ಪವಾರ್ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತಾ, ವಿಪಕ್ಷಗಳು ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಯಾವುದೇ ಆಸಕ್ತಿ ಹೊಂದಿಲ್ಲ ಎಂದರು. ಕೆಲದಿನಗಳ ಹಿಂದೆ ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಏಕತೆಯ ಸಭೆಯಲ್ಲಿ ಕಾಂಗ್ರೆಸ್ನ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಮತ್ತು ಮೈತ್ರಿ ಮಾಡಿಕೊಳ್ಳಲು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಏಕಪಕ್ಷೀಯ ನಿರ್ಧಾರದಿಂದ ಎನ್ಸಿಪಿ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಉಲ್ಲೇಖಿಸಿದರು.
ಮಹಾ ಬೆಳವಣಿಗೆಯಲ್ಲಿ, ಅಜಿತ್ ಪವಾರ್ ಅವರು ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಕೆಲವು ಮುಖಂಡರು ಮತ್ತು ಶಾಸಕರನ್ನು ಭೇಟಿ ಮಾಡಿ ರಾಜಭವನಕ್ಕೆ ತಲುಪಿದರು. ಅಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ರಾಜ್ಯಪಾಲರ ಸಮ್ಮುಖದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.