ನವದೆಹಲಿ: ಬಿಜೆಪಿ (BJP) ವಿರೋಧ ಪಕ್ಷಗಳ ಸರ್ಕಾರ ಉರುಳಿಸುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಮಧ್ಯಪ್ರವೇಶ ಮಾಡಬೇಕು ಎಂದು ಟ್ವೀಟ್ ಮಾಡಿ ಹಿರಿಯ ವಕೀಲ ಕಪಿಲ್ ಸಿಬಲ್ (Kapil Sibal) ಒತ್ತಾಯಿಸಿದ್ದಾರೆ. ಬಿಜೆಪಿ ಚುನಾಯಿತ ಪ್ರತಿಪಕ್ಷ ಸರ್ಕಾರಗಳನ್ನು ಅಸ್ಥಿರಗೊಳಿಸುತ್ತಿದೆ. ಉತ್ತರಾಖಂಡ, ಅರುಣಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಸರ್ಕಾರಗಳನ್ನು ಅಸ್ಥಿರಗೊಳಿಸಿದೆ. ಕಾನೂನು ಇದಕ್ಕೆ ಅವಕಾಶ ನೀಡುತ್ತದೆಯೇ? ಸುಪ್ರೀಂ ಕೋರ್ಟ್ ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಎನ್ಸಿಪಿ ನಾಯಕ ಅಜಿತ್ ಪವಾರ್ ಮತ್ತು ಇತರ ಎಂಟು ಮಂದಿ ಸೇರ್ಪಡೆಗೊಂಡ ನಂತರ ಸಿಬಲ್, ಸುಪ್ರೀಂ ಕೋರ್ಟ್ಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ. ಶರದ್ ಪವಾರ್ ನಿಲುವುಗಳ ವಿರುದ್ಧ ಬಂಡಾಯವೆದ್ದು, ಎನ್ಸಿಪಿ ಅಜಿತ್ ಪವಾರ್ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ನೀಡಿದರು.
ಬಂಡಾಯ ಶಾಸಕರ ಜೊತೆಗೂಡಿ ಬಿಜೆಪಿ ಮತ್ತು ಶಿಂಧೆ ನೇತೃತ್ವದ ಶಿವಸೇನಾ ಸರ್ಕಾರದ ಜೊತೆ ಕೈ ಜೋಡಿಸಿದರು. ಬಳಿಕ ಸರ್ಕಾರದ ಉಪ ಮುಖ್ಯಮಂತ್ರಿ ಸ್ಥಾನ ಕೂಡ ಅಲಂಕರಿಸಿದರು. ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗಿದೆ. ಮಹಾರಾಷ್ಟ್ರದಲ್ಲಿ ನಾಟಕೀಯ ರಾಜಕೀಯ ಬೆಳವಣಿಗೆ ಬಗ್ಗೆ ಪರ-ವಿರೋಧ ಮಾತುಗಳು ಕೇಳಿಬರುತ್ತಿವೆ. ಇದನ್ನು ಇತರೆ ರಾಜ್ಯಗಳ ರಾಜಕೀಯ ಪಕ್ಷಗಳು ಎಚ್ಚರಿಯಾಗಿ ಪರಿಗಣಿಸಿವೆ.