ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ಹಿಟ್ ಸಿನಿಮಾಗಳನ್ನ ನೀಡಿ ಬಳಿಕ ಬಾಲಿವುಡ್ ಗೆ ಎಂಟ್ರಿಕೊಟ್ಟಿರುವ ನಟಿ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ನಟನೆಯ ಹಿಂದಿ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡದೆ ಇದ್ರು ಆಕೆಗಿರೋ ಡಿಮ್ಯಾಂಡ್ ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ. ಸದ್ಯ ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ನಟನೆಯ ಬಹು ನಿರೀಕ್ಷಿತ ಅನಿಮಲ್ ಸಿನಿಮಾದ ರಿಲೀಸ್ ಡೇಟ್ ಮುಂದೂಡಲಾಗಿದ್ದು ಇದೀಗ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ ಚಿತ್ರತಂಡ.
ಇದೇ ಆಗಸ್ಟ್ 11ರಂದು ಅನಿಮಲ್ ಚಿತ್ರ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಈ ಹಿಂದೆ ಮಾಹಿತಿ ನೀಡಿತ್ತು. ಅದಕ್ಕಾಗಿ ಚಿತ್ರತಂಡ ಪ್ರಚಾರವನ್ನೂ ಆರಂಭಿಸಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದ್ದು ಇದೀಗ ಹೊಸ ಡೇಟ್ ಅನೌನ್ಸ್ ಆಗಿದೆ.
ಪ್ರೇಕ್ಷಕರಿಗೆ ಗುಣಮಟ್ಟದ ಸಿನಿಮಾವನ್ನು ನೀಡಬೇಕು ಎಂಬ ಕಾರಣಕ್ಕೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಸಿನಿಮಾ ಗ್ರಾಫಿಕ್ಸ್, ಕಂಟೆಂಟ್, ಲುಕ್ ಎಲ್ಲವೂ ಸರಿಯಾಗಿರಬೇಕು. ಈ ಎಲ್ಲಾ ತಯಾರಿಗೂ ಸಮಯ ಬೇಕು ಎಂದು ‘ಅನಿಮಲ್’ ಚಿತ್ರ ಬಿಡುಗಡೆಯನ್ನ ಮುಂದುಡಲಾಗಿದೆ. ಈ ವರ್ಷದ ಅಂತ್ಯ ಡಿಸೆಂಬರ್ 1ಕ್ಕೆ ಅನಿಮಲ್ ಸಿನಿಮಾ ತೆರೆಗೆ ಬರಲಿದೆ.
‘ಅನಿಮಲ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿದೆ. ಹಿಂದಿ, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಸಿನಿಮಾ ತೆರೆಕಾಣಲಿದೆ. ಚಿತ್ರದಲ್ಲಿ ಒಟ್ಟು 7 ಹಾಡುಗಳು ಇವೆ. ಪ್ರತಿ ಭಾಷೆಯ ಹಾಡುಗಳು ಪ್ರತ್ಯೇಕವಾಗಿ ಸಿದ್ಧವಾಗುತ್ತಿವೆ. ಎಲ್ಲವನ್ನೂ ಸೇರಿದರೆ 35 ಹಾಡುಗಳು ಆಗಲಿವೆ. ಆ ಎಲ್ಲ ಹಾಡುಗಳಲ್ಲಿ ಸಾಹಿತ್ಯದ ಗುಣಮಟ್ಟ ಚೆನ್ನಾಗಿರಬೇಕು ಎಂಬುದು ನಿರ್ದೇಶಕರ ಕಾಳಜಿ. ಇದು ಡಬ್ಬಿಂಗ್ ಸಿನಿಮಾ ಅಂತ ಅನಿಸಬಾರದು ಎಂಬ ಉದ್ದೇಶದಿಂದ ಎಲ್ಲವನ್ನೂ ಪರ್ಫೆಕ್ಟ್ ಆಗಿ ಮಾಡಲು ಅವರು ತೀರ್ಮಾನಿಸಿದ್ದಾರೆ. ಇದೇ ಕಾರಣಕ್ಕಾಗಿ ಸಿನಿಮಾವನ್ನು ಮುಂದೂಡಲಾಗಿದ್ದು ಇದೀಗ ಡಿಸೆಂಬರ್ ಒಂದರಂದು ತೆರೆಗೆ ಬರಲು ಸಿದ್ದವಾಗಿದೆ.