ನವದೆಹಲಿ: 2024ಕ್ಕೆ ಅಲ್ಲ 2047ರ ಸುವರ್ಣಯುಗದ ಮೇಲೆ ಕಣ್ಣಿಡಿ ಎಂದು ಮಂತ್ರಿ ಪರಿಷತ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಕಿವಿ ಮಾತು ಹೇಳಿದರು. ಪ್ರಗತಿ ಮೈದಾನದ ಸಮಾವೇಶ ಕೇಂದ್ರದಲ್ಲಿ ಆಯೋಜಿಸಿದ್ದ ಕೇಂದ್ರ ಸಚಿವ ಸಂಪುಟ ಸಭೆಯ (Union Cabinet Meeting) ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2047ರ ಯುಗ ಭಾರತದ ಸುವರ್ಣಯುಗ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುತ್ತಿರುವಾಗ ಅದರ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಕೆಲಸ ಮಾಡಬೇಕು. 2047ರ ಹೊತ್ತಿಗೆ ಭಾರತ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸಲಿದೆ. ಭಾರತವು ಉನ್ನತ ಶಿಕ್ಷಣ ಪಡೆದ ಉದ್ಯೋಗಿಗಳಿಂದ ತುಂಬಲಿದೆ, ವಿವಿಧ ಕ್ಷೇತ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಸಾಕ್ಷಿಯಾಗಲಿದೆ ಎಂದು ಶ್ಲಾಘಿಸಿದರು.
ನಮ್ಮ ಸರ್ಕಾರ ಕಳೆದ 9 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದೆ, ನಾವು ಮಾಡಿರುವ ಕೆಲಸಗಳನ್ನ ಜನರಿಗೆ ತಿಳಿಸಿ, ತಮ್ಮ ಸಚಿವಾಲಯದ 12 ಸಾಧನೆಗಳನ್ನು ಪಟ್ಟಿ ಮಾಡಿ ಕೆಲಸಗಳನ್ನು ಜನರಿಗೆ ಪ್ರಚಾರ ಮಾಡಿ, ಯೋಜನೆ ತಲುಪಿಸಿ ಎಂದು ಮಂತ್ರಿ ಪರಿಷತ್ ಸಭೆಯಲ್ಲಿ ಪ್ರಧಾನಿ ಮೋದಿ ಸಲಹೆ ನೀಡಿದರು. ವಿದೇಶಾಂಗ, ರಕ್ಷಣಾ ಮತ್ತು ರೈಲ್ವೆ ಸೇರಿದಂತೆ ವಿವಿಧ ಸಚಿವಾಲಯಗಳನ್ನು ಪ್ರತಿನಿಧಿಸುವ ಹಲವಾರು ಕಾರ್ಯದರ್ಶಿಗಳು ಸಭೆಯಲ್ಲಿ ಮಾತನಾಡಿದರು. ಎಲ್ಲಾ ಸಚಿವಾಲಯಗಳು ಮುಂದಿನ 25 ವರ್ಷಗಳ ಭಾರತದ ಅಭಿವೃದ್ಧಿ ಮಾರ್ಗದ ನಕ್ಷೆಯ ಪ್ರಸ್ತುತಿಯನ್ನು ನೀಡಿದವು.