ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ ರಾಜ್ಯ ರಾಜಕಾರಣದಲ್ಲಿ ಎರಡನೇ ಇನ್ನಿಂಗ್ಸ್ ಗಾಲಿ ಜನಾರ್ದನ ರೆಡ್ಡಿ ಆರಂಭಿಸಿದ್ದಾರೆ. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಮತ್ತೆ ವಿಧಾನಸಭೆಗೆ ಪ್ರವೇಶ ಮಾಡಿದ್ದಾರೆ. ಆದ್ರೆ, ಈ ಸಂದರ್ಭದಲ್ಲಿ ಶಾಸಕ ಜನಾರ್ದನ ರೆಡ್ಡಿಗೆ ಹೊಸ ಸಂಕಷ್ಟವೊಂದು ಎದುರಾಗಿದೆ. ಜನಾರ್ದನ ರಡ್ಡಿ ನಾಮಪತ್ರದಲ್ಲಿನ ದೋಷದ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕೊಪ್ಪಳ ಜಿಲ್ಲಾಧಿಕಾರಿಗೆ ರಾಜ್ಯ ಚುನಾವಣಾಧಿಕಾರಿ ಪತ್ರ ಬರೆದಿದ್ದಾರೆ.
ಜನಾದರ್ನ ರೆಡ್ಡಿ ನಾಮಪತ್ರ ಸಲ್ಲಿಸುವಾಗ ಸರಿಯಾದ ಮಾಹಿತಿ ನೀಡಿಲ್ಲ. ವಾಹನಗಳು, ಆಸ್ತಿ ವಿವರ ಸರಿಯಾಗಿ ನೀಡಿಲ್ಲ ಎಂದು ಆರೋಪಿಸಿ ಅನಂತಪುರದ ಗಣಿ ಉದ್ಯಮಿ ಟಪಾಲು ಶ್ಯಾಮ್ ಪ್ರಸಾದ್ ಎನ್ನುವರು ಚುನಾವಣಾ ಆಯೋಕ್ಕೆ ದೂರು ನೀಡಿದ್ದರು. ಈ ದೂರನ್ನು ಚುನಾವಣಾ ಆಯೋಗ ಸಹ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ವರದಿ ನೀಡುವಂತೆ ಕೊಪ್ಪಳ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಇದರಿಂದ ಜನಾದರ್ನ ರೆಡ್ಡಿಗೆ ಢವ ಢವ ಶುರುವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಒಟ್ಟು 65791 ಮತಗಳನ್ನು ಪಡೆದುಕೊಂಡಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ನ ಇಕ್ಬಾಲ್ ಅನ್ಸಾರಿ 57674 ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನಲ್ಲೆ ತೃಪ್ತಿಪಟ್ಟುಕೊಂಡಿದ್ದರು. ಇನ್ನು ಹಾಲಿ ಶಾಸಕರಾಗಿದ್ದ ಬಿಜೆಪಿಯ ಪರಣ್ಣ ಮುನವಳ್ಳಿ 29918 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದರು.
ಇತ್ತೀಚೆಗಷ್ಟೇ ಜನಾರ್ದನ ರೆಡ್ಡಿಯವರ ಅಕ್ರಮ ಆಸ್ತಿ ಜಪ್ತಿ ಮಾಡಲು ಈ ಹಿಂದಿನ ಸರ್ಕಾರ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಇದೀಗ ನಾಮಪತ್ರದಲ್ಲಿ ದೋಷ ಆರೋಪ ಕೇಳಿಬಂದಿದೆ. ಜೈಲಿಗೆ ಹೋಗಿಬಂದ ಬಳಿಕ ಹೊಸ ರಾಜಕೀಯ ಜೀವನ ಆರಂಭಿಸಿರುವ ಗಣಿ ಧಣಿಗೆ ಒಂದಲ್ಲ ಒಂದು ರಾಜಕೀಯ ಅಡೆತಡೆಗಳು ಬರುತ್ತಲೇ ಇವೆ.