ಬೆಂಗಳೂರು ;- ಪ್ರತಿಪಕ್ಷ ನಾಯಕನ ಆಯ್ಕೆ ಕಗ್ಗಂಟ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ ಮುಕ್ತಾಯವಾಗಿದ್ದು, ಹೆಸರು ಪ್ರಕಟಣೆಗೆ ಕೌಂಟ್ಡೌನ್ ಶುರುವಾಗಿದೆ.
ವೀಕ್ಷಕರಾಗಿ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ನಿನ್ನೆ ಅಪರಾಹ್ನ 12 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೂ ಪ್ರಮುಖರ ಅಭಿಪ್ರಾಯ ಸಂಗ್ರಹ ಮಾಡಿದರು.
ಆಯ್ದ ನಾಯಕರ ಅಭಿಪ್ರಾಯ ಸಂಗ್ರಹ ಮುಗಿಸಿದ ನಂತರ ಸಂಜೆ ಏಳು ಗಂಟೆಗೆ ಪಕ್ಷದ ಕಚೇರಿಯಿಂದ ನಿರ್ಗಮಿಸಿದ ಮನ್ಸುಖ್ ಮಾಂಡವೀಯ ಮತ್ತು ವಿನೋದ್ ತಾವಡೆ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ ಧವಳಗಿರಿಗೆ ತೆರಳಿದರು. ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯ ಸದಸ್ಯರೂ ಆಗಿರುವ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದರು.
ಪ್ರತಿಪಕ್ಷ ನಾಯಕರ ಆಯ್ಕೆ ಮತ್ತು ನೂತನ ರಾಜ್ಯಾಧ್ಯಕ್ಷರ ಆಯ್ಕೆ ಕುರಿತಂತೆ ಪಕ್ಷದ ಹೈಕಮಾಂಡ್ ನಿರ್ದೇಶದನದಂತೆ ರಾಜ್ಯದ ಆಯ್ದ ನಾಯಕರ ಅಭಿಪ್ರಾಯ ಸಂಗ್ರಹ ಕಾರ್ಯದ ಬಗ್ಗೆ ಸಮಾಲೋಚನೆ ನಡೆಸಿದರು. ಯಡಿಯೂರಪ್ಪ ಅವರ ಅಭಿಪ್ರಾಯ ಕೂಡ ಬಹಳ ಮುಖ್ಯವಾದ ಹಿನ್ನೆಲೆ ಅವರಿಂದಲೇ ಕೆಲವೊಂದು ಸಲಹೆ ಪಡೆದುಕೊಂಡರು.