ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗಾಳಿಯಲ್ಲಿ ಗುಂಡು ಹೊಡೆಯುವವರು. ಯಾವುದನ್ನೂ ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಕಾಂಗ್ರೆಸ್ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ವಿಚಾರವಾಗಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಎಚ್ ಡಿ ಕುಮಾರಸ್ವಾಮಿ ಕೇವಲ ಆರೋಪ ಮಾಡ್ತಾರೆ. ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುವವರು ಎಂದು ಆರೋಪಿಸಿದರು.
ಕುಮಾರಸ್ವಾಮಿ ಅವರು ಆರೋಪ ಮಾಡುತ್ತಾರೆ. ಆದರೆ ಯಾವುದನ್ನು ತಾರ್ಕಿಕ ಅಂತ್ಯಕ್ಕೆ ತೆಗದುಕೊಂಡು ಹೋಗಲ್ಲ. ಅವರ ಬಳಿ ದಾಖಲೆ ಇದ್ರೆ ಬಿಡುಗಡೆ ಮಾಡಲಿ. ಕುಮಾರಸ್ವಾಮಿ ಬಳಿಯಲ್ಲಿ ದಾಖಲೆ ಇದ್ದಲ್ಲಿ ಸದನದಲ್ಲಿ ದಾಖಲೆ ಬಿಡುಗಡೆ ಮಾಡಲಿ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರಲಿದೆ ಎಂದು ಕುಮಾರಸ್ವಾಮಿ ಅಂದುಕೊಂಡಿದ್ದರು. ಆದರೆ ಅದು ಆಗಿಲ್ಲ, ಹೀಗಾಗಿ ಬಹಳ ನೋವಿನಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದರು. ಭ್ರಷ್ಟಾಚಾರದ ಆರೋಪದ ಕುರಿತು ಕುಮಾರಸ್ವಾಮಿ ಅವರ ಸವಾಲನ್ನು ನಾವು ಸ್ವೀಕಾರ ಮಾಡ್ತೀವಿ ಎಂದು ಇದೇ ಸಂದರ್ಭದಲ್ಲಿ ಎಂ ಬಿ ಪಾಟೀಲ್ ಹೇಳಿದರು.