ಬೆಂಗಳೂರು: ಗೃಹ ಲಕ್ಷ್ಮೀ ಗ್ಯಾರಂಟಿಯಿಂದ ಅತ್ತೆ ಹಾಗೂ ಸೊಸೆ ನಡುವೆ ಬೆಂಕಿ ಹಚ್ಚಿಬಿಟ್ರು ಎಂದು ಮಾಜಿ ಸಚಿವ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಿ ಮಾತನಾಡಿದ ಅವರು, ಕುಟುಂಬದ ಮಹಿಳೆಯರಿಗೆ 2000 ರೂಪಾಯಿ ಅಂದ್ರು. ಗೃಹ ಲಕ್ಷ್ಮೀ ಗ್ಯಾರಂಟಿಯಿಂದ ಅತ್ತೆ ಸೊಸೆ ನಡುವೆ ಬೆಂಕಿ ಹಚ್ಚಿಬಿಟ್ರು. ಇವಾಗ ಪೋರ್ಟಲ್ ಹ್ಯಾಕ್ ಮಾಡ್ಬಿಟ್ಟಿದ್ದೀರಂತೆ. ಮೋದಿ ಮೇಲೆ ಜವಬ್ದಾರಿಯುತ ಸಚಿವರು ಈ ರೀತಿ ಆರೋಪ ಮಾಡ್ತಾರಲ್ಲ..? ಎಂದು ಪ್ರಶ್ನಿಸಿದರು.
ಇದರಿಂದ ಜನರಿಗೆ ಏನು ಸಂದೇಶ ಹೋಗುತ್ತೆ? ಜನರೇ ಈ ಗ್ಯಾರಂಟಿಗಳ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಬಸ್ಸು ಯೋಜನೆ ನಿಂತು ಹೋಗುತ್ತದೆ ಎಂದು ಜನರು ಹೆಚ್ಚೆಚ್ಚು ಓಡಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಐದು ಗ್ಯಾರಂಟಿ ಕೊಟ್ಟರೂ ಷರತ್ತು ಹಾಕಿ ಜನರಿಗೆ ಮೋಸ ಮಾಡುತ್ತಿದೆ ಸರ್ಕಾರ. ಎಲ್ಲ ಗ್ಯಾರಂಟಿಗಳಿಗೂ ನೀವು ಚೆಕ್ ಪೋಸ್ಟ್ ಗಳನ್ನು ಇಟ್ಟಿದ್ದೀರಿ. ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ಗ್ಯಾರಂಟಿ ಜಾರಿ ಮಾಡಿಲ್ಲ,ಹೀಗಾಗಿ ಈ ಸರ್ಕಾರಕ್ಕೆ ಆಡಳಿತ ನಡೆಸುವ ಅಧಿಕಾರ ಇಲ್ಲ ಎಂದರು.