ಬಾಲಿವುಡ್ ನಟ ಅಜಯ್ ದೇವಗನ್ ಬಿಟೌನ ಸ್ಟಾರ್ ನಟರಲ್ಲೊಬ್ಬರು. ಅಜಯ್ ದೇವಗನ್ ಪತ್ನಿ ಕಾಜೋಲ್ ಕೂಡ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದು ನಟನೆಯ ಜೊತೆಗೆ ಇಬ್ಬರು ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದಾರೆ. ಈ ಮಧ್ಯೆ ನಟ ಅಜಯ್ ದೇವಗನ್ ನೂರಾರು ಕೋಟಿ ನೀಡಿ ಮೂರು ಕಚೇರಿಗಳನ್ನು ಮುಂಬೈನಲ್ಲಿ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ.
2000 ನೇ ಇಸವಿಯಲ್ಲಿ ಅಜಯ್ ದೇವಗನ್ ತಮ್ಮದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯೊಂದನ್ನು ಆರಂಭಿಸಿದ್ದರು. ನಿರ್ಮಾಣ ಸಂಸ್ಥೆಯ ಮೂಲಕ ನಿಯಮಿತವಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರಾದರೂ ವಿತರಣೆ ಬಗ್ಗೆ ಹೆಚ್ಚಾಗಿ ಗಮನ ವಹಿಸಿರಲಿಲ್ಲ. ಇದರ ಜೊತೆಗೆ ಎನ್ವೈ ವಿಎಫ್ಎಕ್ಸ್ ವಾಲಾ ಹೆಸರಿನ ವಿಎಫ್ಎಕ್ಸ್ ಸಂಸ್ಥೆಯನ್ನೂ ದೇವಗನ್ ಸ್ಥಾಪಿಸಿದ್ದಾರೆ.
ಇದೀಗ ತಮ್ಮ ಸಿನಿಮಾ ನಿರ್ಮಾಣ, ವಿತರಣೆ ಹಾಗೂ ವಿಎಫ್ಎಕ್ಸ್ ಸಂಸ್ಥೆಗಳ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಹಾಗೂ ಇತರೆ ನಟರ ಸಿನಿಮಾಗಳ ನಿರ್ಮಾಣ ಹಾಗೂ ವಿತರಣೆಯೆಡೆಗೂ ಗಮನ ಹರಿಸುವ ಯೋಜನೆ ಹಾಕಿಕೊಂಡಿದ್ದು ಇದೇ ಕಾರಣಕ್ಕಾಗಿ ದೊಡ್ಡ ಕಚೇರಿಯನ್ನು ದೇವಗನ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಭಾರಿ ದೊಡ್ಡ ಮೊತ್ತವನ್ನೇ ತೆತ್ತು ತಮ್ಮ ರುಚಿಗೆ ಅನುಗುಣವಾಗಿ ಕಚೇರಿಯನ್ನು ನವೀಕರಣ ಮಾಡಿದ್ದಾರೆ.
13,293 ಚದರ ಅಡಿಯ ದೊಡ್ಡ ಅಪಾರ್ಟ್ಮೆಂಟ್ ಅನ್ನು ದೆವಗನ್ ಖರೀದಿ ಮಾಡಿದ್ದಾರೆ. ದೇವಗನ್ರ ಈ ಕಚೇರಿಯು ಮುಂಬೈನ ಒಶಿವಾರದ ವೀರಾ ದೇಸಿ ರಸ್ತೆಯಲ್ಲಿದೆ. ನೊಂದಣಿ ದಾಖಲೆಗಳ ಅನ್ವಯ ಈ ಕಚೇರಿ ಸ್ಥಳಕ್ಕೆ 45.09 ಕೋಟಿ ಮೊತ್ತವನ್ನು ಅಜಯ್ ದೇವಗನ್ ನೀಡಿದ್ದಾರೆ. ಇದು ದಾಖಲಾಗಿರುವ ಮೊತ್ತವಾದರೆ ಇದಕ್ಕಿಂತಲೂ ಸುಮಾರು 30% ಹೆಚ್ಚು ಮೊತ್ತವನ್ನು ಮಾಲೀಕರಿಗೆ ದೇವಗನ್ ನೀಡಿದ್ದಾರೆ ಎನ್ನಲಾಗುತ್ತದೆ. ದಾಖಲೆ ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಸಾಮಾನ್ಯವಾಗಿ ಪ್ರಾಪರ್ಟಿಗಳು ಮಾರಾಟವಾಗುತ್ತವೆ ಎಂಬುದು ಗುಟ್ಟಲ್ಲ.
ಇದರ ಹೊರತಾಗಿ ಮುಂಬೈನ ಮತ್ತೊಂದು ಅಪಾರ್ಟ್ಮೆಂಟ್ ಸಮುಚ್ಛಯದಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿದ್ದು ಇದೂ ಸಹ ಕಚೇರಿಗಾಗಿಯೇ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಮನಿಕಂಟ್ರೋಲ್ ಮಾಹಿತಿ ಪ್ರಕಾರ, 8405 ಚದರ ಅಡಿಯ ದೊಡ್ಡ ಕಚೇರಿ ಸ್ಥಳವನ್ನು 30.35 ಕೋಟಿ ತೆತ್ತು ಅಜಯ್ ಖರೀದಿ ಮಾಡಿದ್ದಾರೆ. ಇದಕ್ಕೂ ಸಹ ದಾಖಲೆಗಳಲ್ಲಿ ನಮೂದಿಸಿದಕ್ಕಿಂತಲೂ ಹೆಚ್ಚಿನ ಮೊತ್ತವನ್ನೇ ಅಜಯ್ ನೀಡಿದ್ದಾರೆ.
ಮೂರನೇ ಕಚೇರಿಯನ್ನು ಮುಂಬೈನ ವೀರ್ ಸಾವರ್ಕರ್ ಪ್ರಾಜೆಕ್ಟ್ಸ್ ನವರಿಂದ ಖರೀದಿ ಮಾಡಿದ್ದು 4893 ಚದರ ಅಡಿಯ ಕಚೇರಿ ಸ್ಥಳವನ್ನು 14.74 ಕೋಟಿ ನೀಡಿ ಖರೀದಿ ಮಾಡಿದ್ದಾರೆ. ಅಲ್ಲಿಗೆ ಮೂರು ಕಚೇರಿಗೆ ಸುಮಾರು 100 ಕೋಟಿಗೂ ಹೆಚ್ಚು ಹಣವನ್ನು ಅಜಯ್ ದೇವಗನ್ ವ್ಯಯಿಸಿದ್ದಾರೆ. ಇದೇ ವರ್ಷದ ಏಪ್ರಿಲ್ನಲ್ಲಿ ಅಜಯ್ ದೇವಗನ್ ಪತ್ನಿ ಕಾಜೋಲ್ ಮುಂಬೈನಲ್ಲಿಯೇ 16.50 ಕೋಟಿ ಹಣ ನೀಡಿ 2493 ಚದರ ಅಡಿಯ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದರು. ಈ ಫ್ಲ್ಯಾಟ್ ಜೊತೆಗೆ ನಾಲ್ಕು ಕಾರುಗಳ ಪಾರ್ಕಿಂಗ್ ಸ್ಥಳವೂ ಅವರಿಗೆ ದೊರಕಿತ್ತು. ಇದಕ್ಕಾಗಿ ಹೆಚ್ಚಿನ ಮೊತ್ತವನ್ನು ಪಾವತಿ ಮಾಡಿದ್ದಾರೆ.