ದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ 2020ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ ಅಂತ್ಯ ಹಾಡಿದ್ದರು.ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕು ಅಂತ್ಯಗೊಳಿಸಿ ಮೂರು ವರ್ಷಗಳು ಕಳೆದಿದೆ. ಆದರೂ, ಅವರು ಬಿಸಿಸಿಐನ ಯಾವುದೇ ಹುದ್ದೆ ಅಲಂಕರಿಸುವಂತ್ತಿಲ್ಲ. 2021ರ ಟಿ20 ವಿಶ್ವಕಪ್ ವೇಳೆ ಧೋನಿ ಭಾರತ ತಂಡದಲ್ಲಿ ಮೆಂಟರ್ ಆಗಿ ಕಾಣಿಸಿಕೊಂಡಿದ್ದರು. ಆದರೆ, ಬಿಸಿಸಿಐನ ಯಾವುದೇ ಹುದ್ದೆ ಅಲಂಕರಿಸಲು ಅನರ್ಹರಾಗಿದ್ದಾರೆ. ಇದಕ್ಕೆ ಬಿಸಿಸಿಐನ ಕೆಲ ನಿಯಮಗಳು ಕಾರಣ. ಸದ್ಯ ಬಿಸಿಸಿಐನಲ್ಲಿ ಭಾರತ ತಂಡದ ಚೀಫ್ ಸೆಲೆಕ್ಟರ್ ಹುದ್ದೆ ಖಾಲಿಯಿದೆ. ಪ್ರತಿಭೆಗಳನ್ನು ಗುರುತಿಸುವಲ್ಲಿ ಧೋನಿ ನಿಸ್ಸೀಮರಾದರೂ, ಈ ಹುದ್ದೆ ಅಲಂಕರಿಸಲು ನಿಯಮಗಳು ಅಡ್ಡಿ ಬರುತ್ತವೆ.
ಆಯ್ಕೆ ಸಮಿತಿಯ ಮುಖ್ಯಸ್ಥನಿಗೆ ಬೇಕಾದ ಎಲ್ಲಾ ಅನುಭವಗಳು ಧೋನಿ ಅವರಲ್ಲಿದೆ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೇವೆಯಲ್ಲಿ ಮುಂದುವರಿದಿರುವುದು ಒಂದೇ ಅವರಿಂದ ಬಿಸಿಸಿಐ ಹುದ್ದೆಯನ್ನು ದೂರ ಮಾಡಿದೆ. ಬಿಸಿಸಿಐನ ನಿಯಮಗಳ ಪ್ರಕಾರ ಯಾವುದೇ ಹುದ್ದೆ ಅಲಂಕರಿಸಲು ಬಯಸುವ ಕ್ರಿಕೆಟಿಗ ತನ್ನ ಕ್ರಿಕೆಟ್ ವೃತ್ತಿಬದುಕಿಗೆ ನಿವೃತ್ತಿ ಹೇಳಿ ಕನಿಷ್ಠ 5 ವರ್ಷ ಕಳೆದಿರಬೇಕು. 41 ವರ್ಷದ ಧೋನಿ 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಬಿಟ್ಟರೂ, ಐಪಿಎಲ್ ಆಟವನ್ನು ಇನ್ನೂ ಮುಂಡುವರಿಸಿದ್ದಾರೆ.
ಭಾರತ ತಂಡದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್, ಟೀಮ್ ಇಂಡಿಯಾ ಚೀಫ್ ಸೆಲೆಕ್ಟರ್ ಹುದ್ದೆ ಅಲಂಕರಿಸುವ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. 2022ರ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತ ತಂಡ ಮುಗ್ಗರಿಸಿದ ಬಳಿಕ ಆಯ್ಕೆ ಸಮಿತಿಯನ್ನು ಬಿಸಿಸಿಐ ಕಿತ್ತೊಗೆದಿದೆ. ಈ ಸಲುವಾಗಿ ಹೊಸ ನೇಮಕಾತಿ ಆರಂಭಿಸಿದ್ದರೂ, ಈವರರೆಗೆ ಯಾರನ್ನೂ ಆಯ್ಕೆ ಮಾಡಲಾಗಿಲ್ಲ.
ಮಾಜಿ ಚೀಫ್ ಸೆಲೆಕ್ಟರ್ ಚೇತನ್ ಶರ್ಮಾ ಅವರನ್ನೇ ಆಯ್ಕೆ ಸಮಿತಿಯಲ್ಲಿ ಕೆಲ ಸಮಯ ಮುಂದುವರಿಯುವಂತೆ ಬಿಸಿಸಿಐ ಮನವಿ ಮಾಡಿಕೊಂಡಿತ್ತು. ಟೀಮ್ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥನ ಹುದ್ದೆ ಅಲಂಕರಿಸುವವರು ವಾರ್ಷಿಕ 1 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಎ. ಆಯ್ಕೆ ಸಮಿತಿ ಸದಸ್ಯರಿಗೆ 90 ಲಕ್ಷ ರೂ. ಸಂಭಾವನೆ ಸಿಗಲಿದೆ.