ಬೆಳಗಾವಿ: ನಗರದಲ್ಲಿ ತಹಶೀಲ್ದಾರ್ (Tahsildar) ಅಶೋಕ್ ಮಣ್ಣಿಕೇರಿ ಅನುಮಾನಸ್ಪದ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ತಮ್ಮ ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್ (Death Note) ಪತ್ತೆಯಾಗಿದೆ. ಬೆಳಗಾವಿ (Belagavi) ನಗರದ ಎಸಿ ಕಚೇರಿಯ ಲಾಕರ್ ಪರಿಶೀಲನೆ ವೇಳೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಜೂನ್ 20ರಂದು ಬರೆದಿಟ್ಟಿದ್ದ ಪತ್ರ ಪೊಲೀಸ್ ಪರಿಶೀಲನೆ ವೇಳೆ ಪತ್ತೆಯಾಗಿದ್ದು, ಸಾವಿಗೆ ಪತ್ನಿಯ ಕಿರುಕುಳವೇ (Harassment) ಕಾರಣ ಎಂದು ನೋಟ್ನಲ್ಲಿ ಉಲ್ಲೇಖಿಸಲಾಗಿದೆ. ತಹಶೀಲ್ದಾರ್ ಹುದ್ದೆಗೆ ಸ್ವಯಂ ನಿವೃತ್ತಿ ಪಡೆಯಲು ಸಿದ್ಧಪಡಿಸಿದ್ದ ಪತ್ರ ಕೂಡ ಪರಿಶೀಲನೆ ವೇಳೆ ಪತ್ತೆಯಾಗಿದೆ.
ಮನೆಯವರ ವಿರೋಧದ ನಡುವೆ ಪ್ರೀತಿಸಿ ಅಶೋಕ್ ಮದುವೆಯಾಗಿದ್ದರು. ಬೆಳಗಾವಿ ಉಪವಿಭಾಗ ಕಚೇರಿಯಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ಜೂನ್ 29ರಂದು ಮನೆಯಲ್ಲಿ ಹೃದಯಾಘಾತದಿಂದ ಸಾವು ಎಂದು ಪ್ರಕರಣ ಬೆಳಕಿಗೆ ಬಂದಿದ್ದು, ಅಶೋಕ್ ಮಣ್ಣಿಕೇರಿ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪತ್ನಿ ಭೂಮಿ ಹಾಗೂ ಪತ್ನಿಯ ಸಹೋದರ ಸ್ಯಾಮುವಲ್ ವಿರುದ್ಧ ಕೇಸ್ ದಾಖಲಾಗಿದೆ. ಎಫ್ಎಸ್ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ತನಿಖೆ ಮುಂದುವರಿದಿದೆ.