ನವದೆಹಲಿ: ಸೇನೆಯಲ್ಲಿ ಮೇಜರ್ ಮತ್ತು ಕ್ಯಾಪ್ಟನ್ ಮಟ್ಟದ ಅಧಿಕಾರಿಗಳ ಕೊರತೆ ಬಗ್ಗೆ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದು, ರಾಜಕೀಯ ಪಕ್ಷಗಳನ್ನು ಒಡೆಯಲು ಮೋದಿ ಸರ್ಕಾರಕ್ಕೆ ಸಮಯವಿದೆ ಆದರೆ, ಸಶಸ್ತ್ರ ಪಡೆಗಳಲ್ಲಿನ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲು ಸಮಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಖರ್ಗೆ ಅವರು ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದು, ಸೇನೆಯು ಮೇಜರ್ ಮತ್ತು ಕ್ಯಾಪ್ಟನ್ ಮಟ್ಟದಲ್ಲಿ ಅಧಿಕಾರಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ ಮತ್ತು ಘಟಕಗಳಲ್ಲಿನ ಕೊರತೆಯನ್ನು ನೀಗಿಸಲು ವಿವಿಧ ಪ್ರಧಾನ ಕಚೇರಿಗಳಲ್ಲಿ ಸಿಬ್ಬಂದಿ ಅಧಿಕಾರಿಗಳ ಪೋಸ್ಟಿಂಗ್ ಅನ್ನು ಕಡಿಮೆ ಮಾಡಲು ಯೋಜಿಸುತ್ತಿದೆ ಎಂದು ಹೇಳಿದ್ದಾರೆ.ವರದಿಯ ಪ್ರಕಾರ, ಅಂತಹ ಹುದ್ದೆಗಳಿಗೆ ಮರು ನೇಮಕಗೊಂಡ ಅಧಿಕಾರಿಗಳನ್ನು ನೇಮಿಸುವ ಬಗ್ಗೆಯೂ ಸೇನೆಯು ಪರಿಗಣಿಸುತ್ತಿದೆ ಎನ್ನಲಾಗಿದೆ.
‘ಮೋದಿ ಸರ್ಕಾರಕ್ಕೆ ರಾಜಕೀಯ ಪಕ್ಷಗಳನ್ನು ಒಡೆಯಲು ಸಮಯವಿದೆ. ಆದರೆ, ಸಶಸ್ತ್ರ ಪಡೆಗಳಲ್ಲಿನ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲು ಸಮಯವಿಲ್ಲ. ಪ್ರತಿದಿನ ‘ರಾಷ್ಟ್ರೀಯತೆ’ ಎಂದು ಕಹಳೆ ಊದುವವರು ನಮ್ಮ ಸಶಸ್ತ್ರ ಪಡೆಗಳಿಗೆ ಇನ್ನಿಲ್ಲದಂತೆ ದ್ರೋಹ ಮಾಡಿದ್ದಾರೆ’ ಎಂದು ಖರ್ಗೆ ಹೇಳಿದರು. ಸದ್ಯ, ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಮೋದಿ ಸರ್ಕಾರದ ಬಳಿ ದೇಶದ ಸೈನಿಕರಿಗೆ ಹಣವಿಲ್ಲ ಎಂಬುದನ್ನು ಅಗ್ನಿಪಥ ಯೋಜನೆ ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತದೆ ಎಂದು ಖರ್ಗೆ ಪ್ರತಿಪಾದಿಸಿದರು.