ಉತ್ತರ ಪ್ರದೇಶ: ಹರ್ಯಾಣ ಮೂಲದ ವ್ಯಕ್ತಿ ಕುಟುಂಬ ಸಮೇತ ಉತ್ತರ ಪ್ರದೇಶ ಪ್ರವಾಸದಲ್ಲಿದ್ದರು. ವಿಶ್ವ ವಿಖ್ಯಾತ ತಾಜ್ ಮಹಲ್ ನೋಡುವ ಬಯಕೆಯಲ್ಲಿದ್ದರು. ಜೊತೆಯಲ್ಲೇ ತಮ್ಮ ಮುದ್ದಿನ ನಾಯಿಯನ್ನೂ ಕರೆ ತಂದಿದ್ದರು. ತಾಜ್ ಮಹಲ್ ಬಳಿ ತಮ್ಮ ಕಾರ್ ಪಾರ್ಕ್ ಮಾಡಿ, ನಾಯಿಯನ್ನ ಕಾರ್ನಲ್ಲೇ ಬಿಟ್ಟು ತಾಜ್ ಮಹಲ್ನತ್ತ ತೆರಳಿದ್ದಾರೆ. ಆದ್ರೆ, ವಾಪಸ್ ಬಂದು ನೋಡುವ ಹೊತ್ತಿಗೆ ನಾಯಿಯು ಉಸಿರುಗಟ್ಟಿ ಕಾರ್ನಲ್ಲೇ ಸತ್ತು ಹೋಗಿದೆ..
ಭಾನುವಾರ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಗ್ರಾದಲ್ಲಿ ವಿಪರೀತ ಬಿಸಿಲು ಇತ್ತು. ಜೊತೆಗೆ ನಾಯಿಯನ್ನು ಕಾರ್ನಲ್ಲಿ ಲಾಕ್ ಮಾಡಿದ ವೇಳೆ ವಿಂಡೋಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. 2 ಗಂಟೆಗಳ ಕಾಲ ಕಾರ್ ಬಂದ್ ಆಗಿತ್ತು. ಹೀಗಾಗಿ, ಕಾರಿನ ಒಳಗೆ ಬಿಸಿಲ ಧಗೆ ಒಂದೆಡೆಯಾದರೆ ಉಸಿರಾಡಲು ಶುದ್ಧ ಗಾಳಿಯೂ ನಾಯಿಗೆ ಸಿಗಲಿಲ್ಲ. ಜೊತೆಗೆ ನಾಯಿಗೆ ಕುಡಿಯಲು ನೀರೂ ಕೂಡಾ ಸಿಗದೆ ಒದ್ದಾಟ ನಡೆಸಿ ದಾರುಣವಾಗಿ ಜೀವ ಬಿಟ್ಟಿದೆ.
ಈ ಘಟನೆಯ ವಿಡಿಯೋ ಕೂಡಾ ವೈರಲ್ ಆಗಿದೆ. ಆಗ್ರಾದ ಸ್ಥಳೀಯ ನಿವಾಸಿಯೊಬ್ಬ ಈ ವಿಡಿಯೋ ಮಾಡಿದ್ದಾನೆ. ಸೋಮವಾರ ಈ ವಿಡಿಯೋವನ್ನು ಆತ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲ್ಯಾಬ್ರಡಾರ್ ರಿಟ್ರೈವರ್ ತಳಿಯ ನಾಯಿಯ ಸಾವಿಗೆ ಮರುಕಗೊಂಡು ಸಂತಾಪ ಸೂಚಿಸಿದ್ದಾರೆ. ಈ ವಿಡಿಯೋ ಆಧಾರದ ಮೇಲೆ ಉತ್ತರ ಪ್ರದೇಶ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಆಗ್ರಾ ಪೊಲೀಸರಿಗೆ ಸೂಚನೆ ನೀಡಿದ್ಧಾರೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.
ಈ ಕುರಿತಾಗಿ ಆಗ್ರಾ ಪೊಲೀಸರೂ ಟ್ವೀಟ್ ಮಾಡಿದ್ದು, ಘಟನೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಮಗೆ ಸೂಚನೆ ಸಿಕ್ಕಿದೆ ಎಂದು ಹೇಳಿದ್ದಾರೆ. ಈ ಘಟನೆ ಸಂಬಂಧ ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆ ಕಾಯ್ದೆ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದಾರೆ.