ಕೋಲ್ಕತ್ತಾ: ಪಂಚಾಯತ್ ಚುನಾವಣೆಗೆ ಮುನ್ನ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸುಳ್ಳಿನ ಬಗ್ಗೆ ಜನರಿಗೆ ಅರಿವಾಗಿರುವುದರಿಂದ ಅದರ ‘ಡಬಲ್-ಎಂಜಿನ್’ ಸರ್ಕಾರದ ಪರಿಕಲ್ಪನೆ ಹಳಿತಪ್ಪಿದೆ ಎಂದು ಹೇಳಿದ್ದಾರೆ. ‘ಬಿಜೆಪಿಯ ಅವಧಿ ಮುಗಿಯುತ್ತಿದೆ; ‘ಡಬಲ್-ಇಂಜಿನ್’ ಸರ್ಕಾರದ ಪರಿಕಲ್ಪನೆಯು ಹಳಿತಪ್ಪಿದೆ. ಅವರು ಮತ್ತೊಮ್ಮೆ ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಆದರೆ, ಈ ಬಾರಿ ಅವರ ಸುಳ್ಳುಗಳ ಬಗ್ಗೆ ಜನರಿಗೆ ತಿಳಿದಿದೆ’ ಎಂದು ಅವರು ಹೇಳಿದರು.
ಎಲ್ಪಿಜಿ ಬೆಲೆ ಏರಿಕೆ ಬಗ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಬಿಜೆಪಿ ಸರ್ಕಾರ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು 1,200 ರೂ. ಗೆ ಏರಿಸಿರುವುದನ್ನು ಕಂಡು ನಾನು ನಿರಾಶೆಗೊಂಡಿದ್ದೇನೆ. ಆದರೆ, ಚುನಾವಣಾ ಸಮಯದಲ್ಲಿ ಅವರು ಸೋಪ್ ನೀಡುವುದಾಗಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ’ ಎಂದರು.
ಬಿರ್ಭೂಮ್ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ನಿಧಿಯ ಸಹಾಯದಿಂದ ಬಾಮ್-ರಾಮ್-ಶ್ಯಾಮ್ ನಮ್ಮ ವಿರುದ್ಧ ಕೈಜೋಡಿಸಿದ್ದಾರೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ. ಅಲ್ಪಸಂಖ್ಯಾತರಿಗಾಗಿ ಐಕ್ಯಶ್ರೀ ಅಥವಾ ಮೇಧಾಶ್ರೀ ವಿದ್ಯಾರ್ಥಿವೇತನಗಳಂತಹ ನಾವು ವಿಶೇಷ ಸವಲತ್ತುಗಳನ್ನು ಪರಿಚಯಿಸಿದ್ದೇವೆ. ಈಮಧ್ಯೆ, ಕೇಂದ್ರವು ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನವನ್ನು ನೀಡುವುದನ್ನು ನಿಲ್ಲಿಸಿದೆ. ಆದರೆ, ನಾವು ಅವುಗಳನ್ನು ನಮ್ಮ ಮೇಧಾಶ್ರೀ ಯೋಜನೆಯ ಮೂಲಕ ಮುಂದುವರಿಸುತ್ತಿದ್ದೇವೆ ಎಂದು ಬ್ಯಾನರ್ಜಿ ಹೇಳಿದರು.
ಅನುಬ್ರತಾ ಮೊಂಡಲ್ ಮತ್ತು ಅವರ ಪುತ್ರಿ ಸುಕನ್ಯಾ ಅವರನ್ನು ಬಂಧಿಸಿದ್ದಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬ್ಯಾನರ್ಜಿ, ‘ಬಿರ್ಭೂಮ್ನಲ್ಲಿ ಅನುಬ್ರತಾ ಮೊಂಡಲ್ ಮತ್ತು ಅವರ ಪುತ್ರಿ ಸುಕನ್ಯಾ ಅವರನ್ನು ಕಂಬಿ ಹಿಂದೆ ಹಾಕಲಾಗಿದೆ. ಒಂದು ವೇಳೆ ತಪ್ಪಿತಸ್ಥರಾಗಿದ್ದರೆ, ಬಿಜೆಪಿಯ ಕೇಂದ್ರದ ತನಿಖಾ ಸಂಸ್ಥೆಗಳು ಏಕೆ ಅದನ್ನು ಸಾಬೀತು ಪಡಿಸಬಾರದು? ಸಾಬೀತುಪಡಿಸಲು ಸಾಧ್ಯವಾಗದೆ ಅನುಬ್ರತಾ ಮೊಂಡಲ್ ಅವರನ್ನು ತೃಣಮೂಲಕ್ಕಾಗಿ ಕೆಲಸ ಮಾಡದಂತೆ ಬಂಧಿಸಿ ಪಂಚರಾಜ್ಯ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯುವಂತೆ ಮಾಡಿದ್ದಾರೆ. ಆದರೆ ಇದೀಗ ಬಿಜೆಪಿಯಲ್ಲಿರುವ ದೇಶದ್ರೋಹಿ ವಿರುದ್ಧ ಯಾರು ಕ್ರಮ ತೆಗೆದುಕೊಳ್ಳುತ್ತಾರೆ? ಬಿಜೆಪಿಯ ಅವಧಿ ಮುಗಿಯುತ್ತಿದೆ ಎಂದು ಅವರು ಕಿಡಿಕಾರಿದರು.