ದೆಹಲಿ: ಕ್ರಿಕೆಟ್ ವಿಶ್ವಕಪ್ ಟೂರ್ನಿಗಳಲ್ಲಿ ನಡೆಯುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಮುಖಾಮುಖಿಗಳಲ್ಲಿ ಟೀಮ್ ಇಂಡಿಯಾ ಏಕಪಕ್ಷೀಯ ಜಯ ದಾಖಲಿಸುತ್ತಾ ಬಂದಿದೆ, ಮುಂದೆಯೂ ಇಂಥದ್ದೇ ಫಲಿತಾಂಶ ಬರಲಿದೆ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ತಂಡದ ಮಾಜಿ ಆಟಗಾರ ಬಸಿತ್ ಅಲಿ ಗಂಗೂಲಿ ವಿರುದ್ಧ ಕಿಡಿಕಾರಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಸಂಪೂರ್ಣ ಭಾರತದ ಆತಿಥ್ಯದಲ್ಲಿ ಆಯೋಜನೆ ಆಗಲಿದೆ. ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ ಟೂರ್ನಿಯಲ್ಲಿ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 15ರಂದು ಪೈಪೋಟಿ ನಡೆಸಲಿವೆ. ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸೌರವ್ ಗಂಗೂಲಿ, ಮುಂಬರುವ ವಿಶ್ವಕಪ್ನಲ್ಲಿ ಭಾರತ-ಪಾಕ್ ಪಂದ್ಯಕ್ಕಿಂತಲೂ ಭಾರತ-ಆಸ್ಟ್ರೇಲಿಯಾ ನಡುವಣ ಪಂದ್ಯವೇ ಅತ್ಯಂತ ಮಹತ್ವದ್ದು ಎಂದಿದ್ದರು.
ಇನ್ನು ಸೌರವ್ ಗಂಗೂಲಿ ಹೇಳಿಕೆಯನ್ನು ಟೀಕೆ ಮಾಡಿರುವ ಬಸಿತ್ ಅಲಿ, 2022ರಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಎದುರು ಸೋಲಿನ ದವಡೆಗೆ ಸಿಲುಕಿದ್ದ ಟೀಮ್ ಇಂಡಿಯಾ ಗೆದ್ದಿದ್ದು ವಿರಾಟ್ ಕೊಹ್ಲಿ ಅವರ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನದಿಂದ ಮಾತ್ರ ಎಂದು ಉದಾಹರಣೆ ನೀಡಿದ್ದಾರೆ.
“ನಾನು ಸೌರವ್ ಗಂಗೂಲಿ ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಬಿಸಿಸಿಐ ಮಾಜಿ ಅಧ್ಯಕ್ಷ ಗಂಗೂಲಿ, ಸರ್ವಶ್ರೇಷ್ಠ ಕ್ರಿಕೆಟ್ ಆಡಿದವರು. ಒಬ್ಬ ನಾಯಕನಾಗಿ ತಂಡವನ್ನು ಅದ್ಭುತವಾಗಿ ಕಟ್ಟಿದವರು. ಹಲವು ಪ್ರತಿಭೆಗಳನ್ನು ಬೆಳೆಸಿದವರು. ಆದರೆ, ಅವರು ಭಾರತ ಮತ್ತು ಪಾಕಿಸ್ತಾನ ನಡುವಣ ವಿಶ್ವಕಪ್ ಪಂದ್ಯದ ಬಗ್ಗೆ ನೀಡಿರುವ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ವಿಶ್ವಕಪ್ ಮುಖಾಮುಖಿಗಳಲ್ಲಿ ಭಾರತ ಏಕಪಕ್ಷೀಯ ಜಯ ದಾಖಲಿಸುತ್ತಾ ಬಂದಿದೆ ಎಂಬುದು ಸುಳ್ಳು,” ಎಂದು ಬಸಿತ್ ಟೀಕೆ ಮಾಡಿದ್ದಾರೆ.
“ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು ಮಣಿಸುತ್ತಾ ಬಂದಿದೆ ನಿಜ. 2017ರವರೆಗೆ ಈ ಪ್ರಾಬಲ್ಯ ಮೂಡಿಬಂದಿದೆ. ನಂತರ ಟಿ20 ವಿಶ್ವಕಪ್ನಲ್ಲಿ ನಾವು ಭಾರತ ತಗಂಡವನ್ನು ಹೀನಾಯವಾಗಿ ಸೋಲಿಸಿದ್ದೇವೆ. ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಮಣಿಸಿದ್ದೇವೆ. ಏಷ್ಯಾ ಕಪ್ ಟೂರ್ನಿಯಲ್ಲೂ ಒಂದು ಸೋತರೂ ಮತ್ತೊಂದು ಪಂದ್ಯ ಗೆದ್ದಿದ್ದೇವೆ. ಅದು ಟಿ20 ಕ್ರಿಕೆಟ್ನಲ್ಲಿ ಭಾರತದ ಎದುರು ಪಾಕಿಸ್ತಾನಕ್ಕೆ ಸಿಕ್ಕ ಅದ್ಭುತ ಗೆಲುವುಗಳಲ್ಲಿ ಒಂದು,” ಎಂದಿದ್ದಾರೆ.