ದೆಹಲಿ: ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಜುಲೈ 12ರಿಂದ ಆತಿಥೇಯರ ಎದುರು 2 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಆಡಲಿದೆ. ಈ ಸರಣಿ ಮೂಲಕ ಟೀಮ್ ಇಂಡಿಯಾ, ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಮೂರನೇ ಆವೃತ್ತಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ದೇಶಿ ಕ್ರಿಕೆಟ್ನಲ್ಲಿ ಮಿಂಚಿರುವ ಬಂಗಾಳದ ಪ್ರತಿಭಾನ್ವಿತ ವೇಗದ ಬೌಲರ್ ಮುಖೇಶ್ ಕುಮಾರ್ ಅವರಿಗೆ ಕೊನೆಗೂ ಟೀಮ್ ಇಂಡಿಯಾದ ಬಾಗಿಲು ತೆರೆದಿದೆ.
ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಸ್ಥಾನದಲ್ಲಿ ಅವಕಾಶ ಪಡೆದುಕೊಂಡಿರುವ ಬಂಗಾಳ ಮೂಲದ 29 ವರ್ಷದ ಬಲಗೈ ವೇಗದ ಬೌಲರ್ ಮುಖೇಶ್ ಕುಮಾರ್, ಕಳೆದ ಮೂರು ವರ್ಷಗಳಲ್ಲಿ ಬಂಗಾಳ ತಂಡದ ಪರ ಬೆಸ್ಟ್ ವೇಗದ ಬೌಲರ್ ಎನಿಸಿದ್ದಾರೆ. ಅವರ ಈ ಕಠಿಣ ಪರಿಶ್ರಮಕ್ಕೆ ಫಲವಾಗಿ ಮೊತ್ತ ಮೊದಲ ಬಾರಿ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಆಗಿದ್ದಾರೆ.
ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವೇಗಿ, ಐಪಿಎಲ್ 2023 ಟೂರ್ನಿ ವೇಳೆ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರಿಂದ ಪಡೆದ ಮಹತ್ವದ ಸಲಹೆ ಬಗ್ಗೆ ಇದೀಗ ಹೇಳಿಕೊಂಡಿದ್ದಾರೆ. ಧೋನಿ ನೀಡಿದ ಬೆಲೆ ಕಟ್ಟಲಾಗದ ಸಲಹೆಯಿಂದ ಬಹಳಾ ಪ್ರೇರಿತರಾಗಿರುವುದಾಗಿ ತಿಳಿಸಿದ್ದಾರೆ.
“ನಾನು ಎಂಎಸ್ ಧೋನಿ ಅವರನ್ನು ಭೇಟಿಯಾಗಬೇಕು ಎಂದು ಬಹಳಾ ಸಮಯದಿಂದ ಅಂದುಕೊಂಡಿದ್ದೆ. ಅವರಲ್ಲಿ ಒಂದೆರಡು ಪ್ರಶ್ನೆಗಳನ್ನು ಕೇಳಬೇಕಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಅವರನ್ನು ಭೇಟಿಯಾಗುವುದು ಸಾಧ್ಯವಾಯಿತು. ಅವರನ್ನು ಭೇಟಿಯಾದಾಗ ಕೇಳಿದ ಮೊದಲ ಪ್ರಶ್ನೆ ಎಂದರೆ, ಒಬ್ಬ ಕ್ಯಾಪ್ಟನ್ ಮತ್ತು ವಿಕೆಟ್ಕೀಪರ್ ಆಗಿ ಬೌಲರ್ನಿಂದ ಏನನ್ನು ಬಯಸುವಿರಿ? ಎಂದು ಕೇಳಿದ್ದೆ,” ಎಂದು ಭಾರತಕ್ಕೆ 2 ವಿಶ್ವಕಪ್ ಗೆದ್ದುಕೊಟ್ಟ ಕ್ಯಾಪ್ಟನ್ ಕೂಲ್ ಅವರನ್ನು ಭೇಟಿಯಾದ ಮೊದಲ ಅನುಭವವನ್ನು ಮುಖೇಶ್ ಹಂಚಿಕೊಂಡಿದ್ದಾರೆ.
ನನ್ನ ಹೆಗಲ ಮೇಲೆ ಕೈ-ಹಾಕಿದ ಅವರು, ‘ನಾನು ಈ ಮಾತನ್ನು ಎಲ್ಲ ಬೌಲರ್ಗಳಿಗೂ ಹೇಳುತ್ತೇನೆ. ಹೊಸತನ್ನು ಪ್ರಯತ್ನ ಮಾಡುವವರೆಗೂ ಏನನ್ನೂ ಕಲಿಯಲು ಸಾಧ್ಯವಿಲ್ಲ. ಏನು ಮಾಡಬೇಕು ಅಂದುಕೊಂಡುವಿರೊ ಅದನ್ನು ಮಾಡಲೇ ಬೇಕು. ಇಲ್ಲವಾದರೆ ಏನನ್ನೂ ಕಲಿಯಲಾಗದು. ಫಲಿತಾಂಶ ಏನೇ ಆಗಿರಲಿ, ಪ್ರಯತ್ನ ಮಾಡಬೇಕು’ ಎಂದರು. ಇದನ್ನು ಬಹಳಾ ವಿವರವಾಗಿ ನನಗೆ ತಿಳಿಸಿಕೊಟ್ಟರು,” ಎಂದು ಮುಖೇಶ್ ಹೇಳಿದ್ದಾರೆ.