ಬಹುಭಾಷಾ ನಟ ಕಮಲ್ ಹಾಸನ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡಿರುವ ಕಮಲ್ ಇವುಗಳ ಚಿತ್ರೀಕರಣ ಮುಗಿಸಿ ಸಕ್ರೀಯ ರಾಜಕಾರಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿ ಅವರು ತೆರೆ ಮರೆಯಲ್ಲಿ ಸಿದ್ದತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಕಮಲ್ ನಟನೆಯ ಮತ್ತೊಂದು ಸಿನಿಮಾ ಘೋಷಣೆಯಾಗಿದ್ದು, ಚಿತ್ರದ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ.
ಕಮಲ್ ಹಾಸನ್ ಸದ್ಯ ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಇಂಡಿಯನ್ 2 ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದಾದ ಬಳಿಕ ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕಿದೆ. ಜೊತೆಗೆ ಪ್ರಭಾಸ್ ನಟನೆಯ ಮುಂದಿನ ಸಿನಿಮಾದಲ್ಲೂ ಕಮಲ್ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾಗಳ ಮಧ್ಯೆಯೇ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಸದ್ಯ ಕಮಲ್ ನಟನೆಯ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಇದು ಕಮಲ್ ಅವರ 233ನೇ (KH 233) ಸಿನಿಮಾವಾಗಿದೆ.
ಕಮಲ್ ನಟನೆಯ 233ನೇ ಚಿತ್ರವನ್ನು ಎಚ್.ವಿನೋದ್ ನಿರ್ದೇಶನ ಮಾಡಲಿದ್ದು, ಸ್ವತಃ ಕಮಲ್ ಹಾಸನ್ ಇದಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅವರದ್ದೇ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರಾಗಲಿದ್ದು ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಕಮಲ್ ಜನನಾಯಕನ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಹೀಗಾಗಿ ಈ ಚಿತ್ರದಲ್ಲಿ ರಾಜಕೀಯ ಕಥೆಯನ್ನು ಹೇಳಲು ಹೊರಟ್ಟಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.