ಹಾಸನ: ದೇಶಾದ್ಯಂತ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಟೊಮ್ಯಾಟೋ ಬೆಲೆ ಶತಕದ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಹಲವರು ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಟೊಮ್ಯಾಟೋಗಳನ್ನು ಕಾಪಾಡಲು ಮುಂದಾಗಿದ್ದಾರೆ. ಇದರ ನಡುವೆ ಹಾಸನ ಜಿಲ್ಲೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೋ ಕಳ್ಳತನವಾಗಿರುವ ಘಟನೆ ನಡೆದಿದೆ. ಲಕ್ಷಾಂತರ ಮೌಲ್ಯದ ಟೊಮ್ಯಾಟೋ ಕಳೆದುಕೊಂಡಿರುವ ರೈತ ಧರಣಿ ಕಂಗಾಲಾಗಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ಕಳ್ಳತನ ನಡೆದಿದ್ದು, ಸುಮಾರು ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಟೊಮ್ಯಾಟೋವನ್ನು ಕಳ್ಳರು ಎಗರಿಸಿದ್ದಾರೆ. ಗೋಣಿ ಸೋಮನಹಳ್ಳಿಯ ಧರಣಿ ಎಂಬುವವರ ಜಮೀನಿನಲ್ಲಿ ಕಳ್ಳತನವಾಗಿದೆ. ಧರಣಿ ಅವರ ಜಮೀನಿನಲ್ಲಿ ಉತ್ತಮ ಟೊಮ್ಯಾಟೋ ಇಳುವರಿ ಬಂದಿದ್ದು, ಕಳೆದ ಮೂರು ದಿನದಿಂದ ಟೊಮ್ಯಾಟೋ ಕೊಯ್ದು ಮಾರಾಟ ಮಾಡುತ್ತಿದ್ದರು.
ಆದರೆ, ರಾತ್ರಿ ಜಮೀನಿಗೆ ನುಗ್ಗಿದ ಕಳ್ಳರು 50 ರಿಂದ 60 ಬ್ಯಾಗ್ನಷ್ಟು ಟೊಮ್ಯಾಟೋ ಕೊಯ್ದಿದ್ದಿದ್ದಾರೆ. ಅಂದಾಜು ಒಂದೂವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮ್ಯಾಟೋ ಕಳ್ಳತನ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಬುಧವಾರ ಬೆಳಗ್ಗೆ ಧರಣಿ ತಮ್ಮ ಜಮೀನಿನ ಬಳಿ ಹೋದಾಗ ಟೊಮ್ಯಾಟೋ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳತನದ ಕುರಿತು ಧರಣಿ ಅವರು ಹಳೇಬೀಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.