ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪಿಹೆಚ್.ಡಿ ಮಾನದಂಡ ಅಲ್ಲ ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ ತಿಳಿಸಿದೆ.
ಈ ಹುದ್ದೆ ನೇಮಕಾತಿಗೆ ಪಿಹೆಚ್.ಡಿ ಕಡ್ಡಾಯಗೊಳಿಸುವ ತನ್ನ ನಿರ್ಧಾರವನ್ನು ಯುಜಿಸಿ ಹಿಂತೆಗೆದುಕೊಂಡಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇರ ನೇಮಕಾತಿಗೆ ನೆಟ್, ಸೆಟ್, ಸ್ಲೆಟ್ನಂತಹ ಪರೀಕ್ಷೆಗಳು ಕನಿಷ್ಠ ಮಾನದಂಡವಾಗಿರುತ್ತದೆ ಎಂದು ಯುಜಿಸಿ ಮೂಲಗಳು ತಿಳಿಸಿವೆ.
ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಗೆ ಇನ್ಮುಂದೆ ಪಿಎಚ್ಡಿ ಅರ್ಹತೆ ಐಚ್ಛಿಕವಾಗಿರುತ್ತದೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್), ರಾಜ್ಯ ಅರ್ಹತಾ ಪರೀಕ್ಷೆ (ಎಸ್ಇಟಿ) ಮತ್ತು ರಾಜ್ಯಮಟ್ಟದ ಅರ್ಹತಾ ಪರೀಕ್ಷೆ (ಎಸ್ಎಲ್ಇಟಿ)ಯು ಹುದ್ದೆಯ ನೇರ ನೇಮಕಾತಿಗೆ ಕನಿಷ್ಠ ಮಾನದಂಡವಾಗಿರುತ್ತದೆ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೇಶ್ ಕುಮಾರ್ ಹೇಳಿದ್ದಾರೆ.
ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ಯುಜಿಸಿ 2018 ರಲ್ಲಿ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿತ್ತು. ಅಭ್ಯರ್ಥಿಗಳು ತಮ್ಮ ಪಿಹೆಚ್.ಡಿ ಪೂರ್ಣಗೊಳಿಸಲು 3 ವರ್ಷಗಳ ಕಾಲಾವಕಾಶ ನೀಡಿತ್ತು. 2021-22ರ ಶೈಕ್ಷಣಿಕ ಅವಧಿಯಿಂದ ನೇಮಕಾತಿಗಾಗಿ ಹೊಸ ಮಾನದಂಡಗಳನ್ನು ಅನ್ವಯಿಸುವಂತೆ ಎಲ್ಲಾ ಕಾಲೇಜು ಮತ್ತು ವಿವಿಗಳಿಗೆ ಸೂಚನೆ ನೀಡಿತ್ತು.