ಮಂಡ್ಯ :- ಜಿಲ್ಲಾ ಹಾಲು ಒಕ್ಕೂಟದ ಉಳಿದ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಬೋರೇಗೌಡ ಹಾಗೂ ಜೆಡಿಎಸ್ ಪಕ್ಷದಿಂದ ಹೆಚ್.ಟಿ.ಮಂಜು, ರಘುನಂದನ್ ಹಾಗೂ ಬಾಲಕೃಷ್ಣ ಅವರುಗಳು ಬೆಳಿಗ್ಗೆ ನಾಮಪತ್ರ ಸಲ್ಲಿಸಿ ಚುನಾವಣೆ ವೇಳೆಗೆ ನಾಲ್ವರು ನಾಪತ್ತೆಯಾದ ಘಟನೆ ಜರುಗಿತು. ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಒಕ್ಕೂಟದ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆಗಳು ಆರಂಭಗೊಂಡು ಕಾಂಗ್ರೆಸ್ ಪಕ್ಷದಿಂದ ಬೋರೇಗೌಡ ಜೆಡಿಎಸ್ ಪಕ್ಷದಿಂದ ಹೆಚ್.ಟಿ.ಮಂಜು, ರಘುನಂದನ್ ಹಾಗೂ ಬಾಲಕೃಷ್ಣ ಅವರುಗಳು ಚುನಾವಣಾಧಿಕಾರಿ ಡಾ. ಹೆಚ್.ಎಲ್. ನಾಗರಾಜ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಮಧ್ಯಾಹ್ನ 1 ಗಂಟೆಗೆ ನಿಗದಿಯಾಗಿದ್ದ ಚುನಾವಣೆಗೆ ಯಾವುದೇ ನಿರ್ದೇಶಕರು ಹಾಜರಾಗಲಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣಾಧಿ ಕಾರಿಗಳು ಸಹಕಾರ ಸಂಘಗಳ ಕಾಯ್ದೆ ಅನ್ವಯ 1 ಗಂಟೆಗಳ ಕಾಲ ಚುನಾವಣೆ ಪ್ರಕ್ರಿಯೆಗಳನ್ನು ವಿಸ್ತರಿಸಿ ಮಧ್ಯಾಹ್ನ 2 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿತ್ತು. ಮಧ್ಯಾಹ್ನ 1 ಗಂಟೆಯ ಬಳಿಕ ನಿರ್ದೇಶಕ ಡಾಲು ರವಿ ಅವರನ್ನು ಹೊರತು ಪಡಿಸಿ ಉಳಿದ ನಿರ್ದೇಶಕರು ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಕಾಯ್ದೆ ಅನ್ವಯ 1 ವಾರಗಳ ಕಾಲ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಗಳನ್ನು ಮುಂದೂಡಿ ಚುನಾವಣಾಧಿಕಾರಿ ಆದೇಶ ಹೊರಡಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚುನಾವಣಾಧಿಕಾರಿ ಹೆಚ್.ಎಲ್.ನಾಗರಾಜ್ ಇಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಒಕ್ಕೂಟದ 12 ಮಂದಿ ನಿರ್ದೇಶಕರು, 1 ನಾಮ ನಿರ್ದೇಶನ, ಮೂವರು ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಮತ ಚಲಾಯಿಸಲು ಅವಕಾಶವಿತ್ತು. ಈಗಾಗಲೇ ಇವರೆಲ್ಲರಿಗೂ ಲಿಖಿತವಾಗಿ ಅಂಚೆ ಮೂಲಕ ನೋಟೀಸ್ ನೀಡಲಾಗಿತ್ತು. ಆದರೆ, ಬೆಳಿಗ್ಗೆ ನಾಲ್ವರು ನಿರ್ದೇಶಕರು ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ವೇಳೆಗೆ ಡಾಲು ರವಿ ಅವರನ್ನು ಹೊರತುಪಡಿಸಿ ಯಾವುದೇ ನಿರ್ದೇಶಕರು ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ 7 ದಿನಗಳ ಒಳಗೆ ಬಾಕಿ ಇರುವ ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಇನ್ನು ಚುನಾವಣಾ ಪ್ರಕ್ರಿಯೆಗಳ ನಡುವೆ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ ಆದೇಶವೊಂದನ್ನು ಹೊರಡಿಸಿ ನಿಯಮಗಳನ್ನು ಉಲ್ಲಂಘಿಸಿ ಸಹಕಾರಿ ಸಂಸ್ಥೆಗೆ ನಿವೇಶನ ಖರೀದಿ, ಪ್ರಾಧಿಕಾರದ ಅನುಮತಿ ಪಡೆಯದೇ ಸಹಕಾರಿ ಸಂಘದ ಕಟ್ಟಡ ನಿರ್ಮಾಣ ಇವೆಲ್ಲ ಅಂಶಗಳನ್ನು ಪರಿಗಣಿಸಿ ಮನ್ ಮುಲ್ ನಿರ್ದೇಶಕರಾದ ಬಿ.ಆರ್.ರಾಮಚಂದ್ರ ಹಾಗೂ ವಿಶ್ವನಾಥ್ ಅವರುಗಳನ್ನು ಅನರ್ಹಗೊಳಿಸಿ, ಸಹಕಾರ ಸಂಘಗಳ ಯಾವುದೇ ಸಭೆಯಲ್ಲಿ ಭಾಗವಹಿಸದಂತೆ ಆದೇಶ ಹೊರಡಿಸಿದ್ದಾರೆಂದು ಚುನಾವಣಾಧಿಕಾರಿ ಹೇಳಿದರು. ಹೀಗಾಗಿ ಇಂದು ನಡೆಯಬೇಕಿದ್ದ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಲಾಯಿತು.
ಹೊರೆ ಹೊತ್ತಿದ್ದರು ಕೈ ಗೆ ಬೆಂಬಲ
ಇನ್ನು ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ನಿರ್ದೇಶಕ ಡಾಲು ರವಿ ಜೆಡಿಎಸ್ ಪಕ್ಷದಲ್ಲಿದ್ದರು ಕಾಂಗ್ರೆಸ್ ಅಭ್ಯರ್ಥಿ ಬೋರೇಗೌಡ ಅವರಿಗೆ ಬೆಂಬಲ ನೀಡಲು ಮುಂದಾಗಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದಿಂದ ಹೊರ ನಡೆದು ಜೆಡಿಎಸ್ ಸೇರಿಕೊಂಡು ಶಾಸಕ ಹೆಚ್.ಟಿ.ಮಂಜು ಅವರ ಗೆಲುವಿಗೆ ಡಾಲು ರವಿ ಸಾಕಷ್ಟು ಶ್ರಮಿಸಿದ್ದರು.
ಮೊದಲ ಅವಧಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೋರೇಗೌಡ ಅವರು ಆಕಾಂಕ್ಷಿಯಾಗಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಧ್ಯಕ್ಷ ಸ್ಥಾನ ಜೆಡಿಎಸ್ ನ ರಾಮಚಂದ್ರು ಪಾಲಾಗಿತ್ತು. ಆದರೆ, ನಾನು ಈಗಾಗಲೇ ನಮ್ಮ ವರಿಷ್ಠರು, ನಾಯಕರ ಜೊತೆ ಚರ್ಚಿಸಿ ಈ ಬಾರಿ ಬೋರೇಗೌಡ ಅವರಿಗೆ ಬೆಂಬಲ ಸೂಚಿಸುತ್ತಿದ್ದೇನೆ ಎಂದು ಹೇಳಿದ್ದೇನೆ. ಹೀಗಾಗಿ ಕೈ ಅಭ್ಯರ್ಥಿ ಗೆ ನನ್ನ ಬೆಂಬಲ ಸೂಚಿಸುತ್ತಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ವರದಿ : ಗಿರೀಶ್ ರಾಜ್ ಮಂಡ್ಯ