ಬೆಂಗಳೂರು: ದುಡಿಯಲು ಸಮರ್ಥಳಾಗಿರುವ ಪತ್ನಿಯು ಪತಿಯಿಂದ ಹೆಚ್ಚಿನ ಜೀವನಾಂಶ ಕೋರಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಕೌಟುಂಬಿಕ ವ್ಯಾಜ್ಯವೊಂದರಲ್ಲಿ ಪತ್ನಿಗೆ ಮ್ಯಾಜಿಸ್ಪ್ರೇಟ್ ನ್ಯಾಯಾಲಯ ಘೋಷಿಸಿದ್ದ ಮಾಸಿಕ 10 ಸಾವಿರ ರೂ. ಜೀವನಾಂಶ ಹಾಗೂ 3 ಲಕ್ಷ ರೂ. ಪರಿಹಾರವನ್ನು ಕ್ರಮವಾಗಿ 5 ಸಾವಿರ ರೂ. ಹಾಗೂ 2 ಲಕ್ಷ ರೂ.ಗಳಿಗೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.
ಜೀವನಾಂಶ ಹಾಗೂ ಪರಿಹಾರದ ಮೊತ್ತ ಕಡಿತಗೊಳಿಸಿದ್ದ ಬೆಂಗಳೂರಿನ 66ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆನೇಕಲ್ನ ಮಹಿಳೆ ಮತ್ತವರ ಅಪ್ರಾಪ್ತ ಪುತ್ರ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಏಕಸದಸ್ಯಪೀಠ, ಈ ಆದೇಶ ಮಾಡಿದೆ.
ಪತ್ನಿ ಈಗ ಕೆಲಸ ಮಾಡಲು ಏಕೆ ಸಮರ್ಥರಿಲ್ಲ
”ವಿವಾಹಕ್ಕೂ ಮುನ್ನ ಅರ್ಜಿದಾರ ಮಹಿಳೆ ಕೆಲಸ ಮಾಡುತ್ತಿದ್ದರು ಎನ್ನುವುದು ದಾಖಲೆಗಳಿಂದ ತಿಳಿದು ಬಂದಿದೆ. ಪತಿಯಿಂದ ದೂರವಾದ ಬಳಿಕ ತಾಯಿ ಹಾಗೂ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಪತ್ನಿ, ಪತಿಯ ತಾಯಿ ಹಾಗೂ ಸಹೋದರಿಯ ಜತೆ ವಾಸಿಸಲು ನಿರಾಕರಿಸಿದ್ದಾರೆ. ದಿನಸಿ ಅಂಗಡಿ ನಡೆಸುತ್ತಿರುವ ಪತಿ ತನ್ನ ತಾಯಿ ಹಾಗೂ ಅವಿವಾಹಿತ ಸಹೋದರಿಯನ್ನೂ ನೋಡಿಕೊಳ್ಳಬೇಕಿದೆ. ಮದುವೆಯ ನಂತರ ಕೆಲಸ ತೊರೆದಿರುವ ಪತ್ನಿ, ಈಗ ಕೆಲಸ ಮಾಡಲು ಏಕೆ ಸಮರ್ಥರಿಲ್ಲ ಎಂಬುದಕ್ಕೆ ಯಾವುದೇ ವಿವರಣೆ ನೀಡಿಲ್ಲ,”ಎಂದು ಹೈಕೋರ್ಟ್ ಆದೇಶಿಸಿದೆ.
ಪತ್ನಿ ಸಂಪೂರ್ಣ ಜೀವನಾಂಶ ಕೇಳಬಾರದು
”ದುಡಿಯುವ ಸಾಮರ್ಥ್ಯವಿರುವ ಪತ್ನಿ ಉದ್ಯೋಗ ಮಾಡದೆ ಸುಮ್ಮನೆ ಕುಳಿತು ಪತಿಯಿಂದಲೇ ಸಂಪೂರ್ಣ ಜೀವನಾಂಶವನ್ನು ಕೇಳುವಂತಾಗಬಾರದು. ಜೀವನ ನಿರ್ವಹಣೆಗಾಗಿ ಪ್ರಯತ್ನಿಸುವ ಹೊಣೆ ಆಕೆಯ ಮೇಲೂ ಇದ್ದು, ಪತಿಯಿಂದ ಪೂರಕ ಜೀವನಾಂಶವನ್ನಷ್ಟೇ ಕೇಳಬಹುದು. ಈ ಹಿನ್ನೆಲೆಯಲ್ಲಿಜೀವನಾಂಶ ಹಾಗೂ ಪರಿಹಾರದ ಮೊತ್ತ ಕಡಿತಗೊಳಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಆದೇಶದಲ್ಲಿಹೈಕೋರ್ಟ್ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡು ಬರುತ್ತಿಲ್ಲ” ಎಂದು ಪತ್ನಿಯ ಅರ್ಜಿ ವಜಾಗೊಳಿಸಿದೆ.