ಬೆಂಗಳೂರು ;– ವಿಧಾನಸಭೆಯಲ್ಲಿ ನಾಗಮಂಗಲ ಕೆಎಸ್ಆರ್ ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಅವರು ಗಂಭೀರವಾಗಿ ಉತ್ತರ ನೀಡಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಎರಡು ಭಾರಿ ಮುಖ್ಯಮಂತ್ರಿ ಆಗಿ ಅನುಭವ ಇರುವವರು, ಅದೇ ರೀತಿಯಲ್ಲಿ ಸಚಿವ ಚಲುವರಾಯಸ್ವಾಮಿ ಅವರ ಜೊತೆಯಲ್ಲಿ ಕೆಲಸ ಮಾಡಿದ್ದಂತಹವರು. ಒಂದು ಇತಿ ಮಿತಿಯಲ್ಲಿ ಚರ್ಚೆ ನಡೆದರೆ ಸದನಕ್ಕೆ ಗೌರವ ಬರುತ್ತೆ. ಸದನದಲ್ಲಿ ಗುರುವಾರ ನಡೆದಿದ್ದು ಎರಡೂ ಕಡೆಯಿಂದ ಸ್ವಲ್ಪ ಅತಿಯಾಯಿತು ಅನ್ನಿಸಿತು. ಅದು ಮರುಕಳಿಸಬಾರದು ಎಂದು ಮನವಿ ಮಾಡಿದರು. ಈ ಪ್ರಕರಣವನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸುತ್ತೇವೆ. ಕೆಎಸ್ಆರ್ಟಿಸಿ ಇಲಾಖೆ ಹಿರಿಯ ಅಧಿಕಾರಿಗಳನ್ನು ಒಳಗೊಂಡು ತನಿಖೆ ನಡೆಸಿ ವರದಿ ತರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಪ್ರಕರಣ ಸಂಬಂಧ ಸರ್ಕಾರದಿಂದ ಸೂಕ್ತ ಉತ್ತರ ಬಂದಿಲ್ಲ ಎಂದು ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಸದನದ ಭಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಉತ್ತರ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಜಗದೀಶ್ ಡ್ರೈವರ್ ಕಮ್ ಕಂಡಕ್ಟರ್ ಆಗಿದ್ದಾರೆ. ನಿಗಮದ ಸಿಬ್ಬಂದಿಯನ್ನು ಕೋರಿಕೆ ಮೇಲೆ ಮಾತ್ರ ವರ್ಗಾವಣೆ ಮಾಡುತ್ತೇವೆ. ಉದ್ದೇಶ ಪೂರ್ವಕವಾಗಿ ಏನು ಮಾಡಿಲ್ಲ. ಆಡಳಿತಾತ್ಮಕ ವಿಚಾರಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಿಸುತ್ತೇನೆ. ಅಧಿಕಾರಿಗಳದ್ದು ತಪ್ಪು ಇದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.