ಮೈಸೂರು : ನಾಗಮಂಗಲದಲ್ಲಿ ಕೆಎಸ್ಆರ್ಟಿಸಿ ಉದ್ಯೋಗಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ವಜಾಗೊಳಿಸುವಂತೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಸರ್ಕಾರ ಬಂದು ಒಂದು ತಿಂಗಳಾಗುವಷ್ಟರಲ್ಲೇ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಕೂಡಲೇ ಸಚಿವ ಚಲುವರಾಯಸ್ವಾಮಿಯನ್ನು ವಜಾ ಮಾಡಿ, ಪ್ರಕರಣದ ತನಿಖೆ ಮಾಡುವಂತೆ ಎಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಮಂತ್ರಿಗಳು ಹದ್ದುಬಸ್ತಿನಲ್ಲಿ ಕೆಲಸ ಮಾಡುವಂತೆ ಮಾಡಿ, ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಒಂದು ವರ್ಗಾವಣೆ ಮಾಡಿಲ್ಲ. ರಾಜ್ಯದಲ್ಲಿ ಎಲ್ಲಾ ಕಡೆ ದ್ವೇಷದ ರಾಜಕಾರಣ ಶುರುವಾಗಿಬಿಟ್ಟಿದೆ. ಕಾಂಗ್ರೆಸ್ ಶಾಸಕರ ಹಣೆ ಬರಹ ಏನಾಗಿದೆ ಅಂತಲೂ ಗೊತ್ತು. ಹಣ ಕೊಡದಿದ್ದರೇ ಅವರ ಕೆಲಸವೂ ಆಗುತ್ತಿಲ್ಲ. ದುಡ್ಡು ಬೇಕಾದರೆ ಮಾಡಿಕೊಳ್ಳಲಿ, ಜೀವದ ಜೊತೆ ಚೆಲ್ಲಾಟವಾಡುವುದು ಬೇಡ ಸದನದಲ್ಲಿ ಇದೇ ವಿಚಾರ ಇಟ್ಟು ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುಡ್ಡು ತೆಗೆದುಕೊಂಡು ವರ್ಗಾವಣೆ ಅವರ ಛಾಳಿ, ಅದು ಅವರ ಹಣೆಬರಹ. ಆದರೆ, ರಾಜಕೀಯ ಕಾರಣಕ್ಕಾಗಿ ಈ ರೀತಿಯ ಕಿರುಕುಳ ನೀಡುವುದನ್ನು ನಾವು ಸಹಿಸುವುದಿಲ್ಲ. ಆತ್ಮಹತ್ಯೆಗೆ ಯತ್ನಿಸಿರುವ ಜಗದೀಶ್ ಕುಟುಂಬದವರು ಜೆಡಿಎಸ್ನ ನಿಷ್ಠಾವಂತ ಕಾರ್ಯಕರ್ತರು. ಅಧಿಕಾರದ ದರ್ಪ ಈ ಮಟ್ಟಕ್ಕೆ ಹೋಗಬಾರದು. ಹಣದ ದಂಧೆ ಆಯ್ತು, ಈಗ ರಾಜಕೀಯದ ತೆವಲುಗಳಿಗೆ ಜೀವದ ಜೊತೆ ಚೆಲ್ಲಾಟ ಶುರು ಮಾಡಿದ್ದಾರೆ. ಈ ಬಗ್ಗೆ ಇವತ್ತು ವಿಧಾನಸಭೆಯಲ್ಲಿ ಚರ್ಚಿಸುತ್ತೇನೆ. ಇದಕ್ಕಿಂತ ಮುಖ್ಯ ವಿಚಾರ ಇನ್ನೇನಿದೆ ಹೇಳಿ? ಎಂದು ಪ್ರಶ್ನಿಸಿದರು.
ಆಸ್ತಿ ಬಗ್ಗೆ ಅಂತರಾಷ್ಟ್ರೀಯ ಸಂಸ್ಥೆಯಿಂದ ತನಿಖೆ ಮಾಡಲಿ!
ವಿರೋಧ ಪಕ್ಷದ ಶಾಸಕರ ಮನೆ ಹಾಳಾಗಲಿ, ಕೆಲವು ಕಾಂಗ್ರೆಸ್ ಶಾಸಕರು ಮನೆ ಕೂಡ ಇಲ್ಲಿ ಹಾಳಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಇಬ್ಬರಿಗೂ ವಿರೋಧ ಪಕ್ಷದ ಸ್ಥಾನದಲ್ಲಿ ಜನ ಕೂರಿಸಿದ್ದಾರೆ. ಬಿಜೆಪಿಯಲ್ಲೂ ವಿರೋಧ ಪಕ್ಷದ ನಾಯಕರಾಗಲು ಹಲವಾರು ಸಮರ್ಥರಿದ್ದು, ಯಾರಾದರೂ ಒಬ್ಬರು ಆಗುತ್ತಾರೆ. ನಮ್ಮ ಕುಟುಂಬದ ಆಸ್ತಿಯ ಬಗ್ಗೆ ಈ ಸರ್ಕಾರ ಇಂಟರ್ನ್ಯಾಷನಲ್ ತನಿಖಾ ಸಂಸ್ಥೆಯಿಂದ ಬೇಕಾದರೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ಆತ್ಮಹತ್ಯೆಗೆ ಯತ್ನಿಸಿರುವ ಜಗದೀಶ್ ಸದ್ಯಕ್ಕೆ ವೆಂಟಿಲೇಟರ್ನಲ್ಲಿ ಇದ್ದಾರೆ. ಸರ್ಕಾರ ಬಂದು ಐವತ್ತು ದಿನ ಆಗಿಲ್ಲ. ವರ್ಗಾವಣೆ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ಜಗದೀಶ್ ಪತ್ನಿ ಪಂಚಾಯತಿ ಸದಸ್ಯರು. ಈಗ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಬಂದಿದೆ. ಆದರೆ, ಇನ್ನು ಒಂದು ತಿಂಗಳಾಗಿಲ್ಲ. ಆಗಲೇ ದ್ವೇಷ ರಾಜಕಾರಣ ಆರಂಭಿಸಿದ್ದಾರೆ ಎಂದು ಕಿಡಿಕಾರಿದರು.
ಮಾನ, ಮರ್ಯಾದೆ ಇದ್ದರೆ ಸಚಿವರನ್ನು ವಜಾ ಮಾಡಿ!
ಊರಿನಲ್ಲಿರುವ ರೌಡಿ, ಚೇಲಾ ಮಹದೇವ ಎಂಬಾತ ಕುಟುಂಬಕ್ಕೆ ಕಿರುಕುಳ ನೀಡಿದ್ದಾನೆ. ಈ ಹೆಣ್ಣು ಮಗಳು ಜೆಡಿಎಸ್ ಪಕ್ಷ ಬಿಡುವಂತೆ, ಕಾಂಗ್ರೆಸ್ ಸೇರುವಂತೆ ಒತ್ತಡ ಹೇರಿದ್ದಾನೆ. ಮತ್ತೊಂದೆಡೆ ಜಗದೀಶ್ಗೆ ಅಧಿಕಾರಿಗಳ ಮೂಲಕ ಕಿರುಕುಳ ಕೊಡಿಸಲಾಗಿದೆ. ಪತ್ರದಲ್ಲಿ ಜಗದೀಶ್ ಅವರು ಇದನ್ನು ಸ್ಪಷ್ಟವಾಗಿ ಬರೆದಿದ್ದಾರೆ. ಸಚಿವರ ಆದೇಶ ಇದೆ, ಒತ್ತಡ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಲಿ ಎಂದು ಆಗ್ರಹಿಸಿದರು.