ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಈಗಾಗಲೇ ತನ್ನದೇ ಕೈಲಾಸ ದೇಶವನ್ನು ಸ್ಥಾಪಿಸಿಕೊಂಡಿದ್ದಾನೆ. ಇದೀಗ ಕೈಲಾಸಕ್ಕೆ ತನ್ನ ಆತ್ಮೀಯ ಶಿಷ್ಯ, ನಟಿ ರಂಜಿತಾರನ್ನು ಪ್ರಧಾನಿಯನ್ನಾಗಿ ಮಾಡಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕೈಲಾಸ ದೇಶ ಎಂಬ ಹೊಸ ದೇಶವನ್ನೇ ಕಟ್ಟಿರುವ ನಿತ್ಯಾನಂದ ಹಲವು ವರ್ಷಗಳ ಕಾಲ ತನ್ನ ಶಿಷ್ಯರ ಜೊತೆ ಅಲ್ಲಿಯೇ ನೆಲೆಯೂರಿದ್ದಾನೆ. ಇದೀಗ ಆ ದೇಶಕ್ಕೆ ಪ್ರಧಾನಿಯನ್ನು ನೇಮಕ ಮಾಡಿದ್ದಾನೆ. ನಟಿ ರಂಜಿತಾ ಕಾರಣದಿಂದಾಗಿಯೇ ನಿತ್ಯಾನಂದ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದು, ಇಬ್ಬರ ನಡುವಿನ ಖಾಸಗಿ ವಿಡಿಯೋ ವಿಚಾರವಾಗಿ ಕೋರ್ಟ್ ಮೆಟ್ಟಿಲು ಕೂಡ ಏರಿದ್ದ. ನಂತರ ದೇಶವನ್ನೇ ಬಿಡಬೇಕಾಗಿ ಬಂತು. ದೇಶವನ್ನು ತೊರೆಯುವಾಗ ತನ್ನ ಅಷ್ಟೂ ಶಿಷ್ಯರನ್ನು ಕರೆದೊಯ್ದು, ಹೊಸ ದೇಶ ಕಟ್ಟಿ ಮತ್ತೆ ಅಚ್ಚರಿ ಮೂಡಿಸಿದೆ. ಈ ದೇಶಕ್ಕೆ ರಂಜಿತಾ ಅವರನ್ನು ಪ್ರಧಾನಿ ಮಾಡಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಹಿಂದೆ ತನ್ನ ದೇಶದ ಕರೆನ್ಸಿಯನ್ನು ನಿತ್ಯಾನಂದ ಬಿಡುಗಡೆ ಮಾಡಿದ್ದ. ತನ್ನ ದೇಶದ ವೀಸಾ ಕೂಡ ಘೋಷಿಸಿದ್ದ. ಕೈಲಾಸ ದೇಶಕ್ಕೆ ಬರುವವರು ಯಾವೆಲ್ಲ ನಿಯಮ ಪಾಲಿಸಬೇಕು ಎನ್ನುವ ಕುರಿತಾದ ವೆಬ್ ಸೈಟ್ ಕೂಡ ನಿತ್ಯಾನಂದ ಮಾಡಿಕೊಂಡಿದ್ದಾನೆ. ಯಾರಿಗೆಲ್ಲ ವೀಸಾ ಕೊಡಲಾಗುತ್ತದೆ ಎನ್ನುವ ವಿವರಣೆಯನ್ನು ಅದರಲ್ಲಿ ನೀಡಿದ್ದಾನೆ. ಇದೀಗ ತನ್ನ ದೇಶಕ್ಕೆ ನಟಿ ರಂಜಿತಾರನ್ನು ಪ್ರಧಾನಿಯನ್ನಾಗಿ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾನೆ.