ಇಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ನಲ್ಲಿ ಚಿತ್ರರಂಗಕ್ಕೆ ಭರ್ಜರಿ ಕೊಡುಗೆಯನ್ನು ಘೋಷಿಸಿರುವ ಸಿದ್ದ ಸರ್ಕಾರ ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ಚಿತ್ರನಗರಿ ಕುರಿತು ಈ ಬಾರಿಯೂ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು, ಮೈಸೂರಿನಲ್ಲಿ ಚಿತ್ರನಗರಿ ಮಾಡುವುದಾಗಿ ತಿಳಿಸಿದ್ದಾರೆ.
2015-16ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಚಿತ್ರನಗರಿ ಸ್ಥಾಪಿಸಲು ಘೋಷಿಸಲಾಗಿತ್ತು. ನಂತರದ ಸರಕಾರವು ಸದರಿ ಚಿತ್ರನಗರಿಯನ್ನು ಬೆಂಗಳೂರಿಗೆ ಸ್ಥಳಾಂತರಗೊಳಿಸಲು ಉದ್ದೇಶಿಸಿತ್ತು. ಆದರೆ, ಇಲ್ಲಿವರೆಗೂ ಅನುಷ್ಠಾನಗೊಂಡಿಲ್ಲ. ಈ ಬಾರಿ ಮೈಸೂರು ಜಿಲ್ಲೆಯಲ್ಲೇ ಚಿತ್ರನಗರಿ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಹಲವಾರು ಬಾರಿ ಚಿತ್ರನಗರಿಯ ಕುರಿತು ಬಜೆಟ್ ನಲ್ಲಿ ಪ್ರಸ್ತಾಪವಾಗಿತ್ತು. ಕಾಂಗ್ರೆಸ್ ಸರಕಾರ ಮೈಸೂರಿನಲ್ಲಿ ಚಿತ್ರನಗರಿ ಮಾಡಲಾಗುವುದು ಎಂದರೆ ಜೆಡಿಎಸ್ ಸರಕಾರ ರಾಮನಗರದಲ್ಲಿ ಚಿತ್ರನಗರಿ ಮಾಡುವುದಾಗಿ ತಿಳಿಸಿತ್ತು. ಬಿಜೆಪಿ ಸರಕಾರವು ಅದನ್ನು ಬೆಂಗಳೂರಿನಲ್ಲೇ ಮಾಡುವುದಾಗಿ ಘೋಷಣೆ ಮಾಡಿತ್ತು. ಇದೀಗ ಕಾಂಗ್ರೆಸ್ ಮಾತಿನಂತೆ ಮತ್ತೆ ಚಿತ್ರನಗರಿ ಮೈಸೂರನಲ್ಲಿ ಮಾಡುವುದಾಗಿ ಘೋಷಣೆಯಾಗಿದೆ.