ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಡೆಂಗೀ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ರಾಜ್ಯದಲ್ಲಿ ಮಳೆಯಿಂದಾಗಿ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, ಈ ತಿಂಗಳು ಐದು ದಿನಗಳಲ್ಲಿ 172 ಮಂದಿ ಡೆಂಗಿ ಜ್ವರದಿಂದ ಬಳಲಿದ್ದಾರೆ.
ಈ ವರ್ಷ ಈಗಾಗಲೇ 41 ಸಾವಿರಕ್ಕೂ ಅಧಿಕ ಡೆಂಗಿ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ 28 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 2,432ಕ್ಕೆ ತಲುಪಿದೆ.
ಕಳೆದ ವರ್ಷ 9,620 ಮಂದಿ ಡೆಂಗಿ ಜ್ವರದಿಂದ ಬಳಲಿದ್ದರು. ಅವರಲ್ಲಿ ಒಂಬತ್ತು ಮಂದಿ ಜ್ವರದ ತೀವ್ರತೆಗೆ ಮೃತಪಟ್ಟಿರುವುದು ದೃಢಪಟ್ಟಿತ್ತು. ಈ ವರ್ಷ ಮರಣ ವರದಿಯಾಗಿಲ್ಲ.
ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 1,759 ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು, 804 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ. ಮೈಸೂರಿನಲ್ಲಿ 211, ವಿಜಯಪುರದಲ್ಲಿ 120, ಚಿತ್ರದುರ್ಗದಲ್ಲಿ 94, ಶಿವಮೊಗ್ಗದಲ್ಲಿ 83, ಧಾರವಾಡ ಹಾಗೂ ಗದಗದಲ್ಲಿ ತಲಾ 82, ಬೆಳಗಾವಿಯಲ್ಲಿ 78, ಕೊಡಗಿನಲ್ಲಿ 70, ಬಳ್ಳಾರಿಯಲ್ಲಿ 69, ದಾವಣಗೆರೆಯಲ್ಲಿ 64 ಹಾಗೂ ದಕ್ಷಿಣ ಕನ್ನಡದಲ್ಲಿ 63 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 60ಕ್ಕಿಂತ ಕಡಿಮೆಯಿದೆ.